ಫೈನಲ್‌ನಲ್ಲಿ ನನ್ನ ಜಾವೆಲಿನ್ ಪಾಕ್ ಅಥ್ಲೀಟ್ ಬಳಿಯಿತ್ತು: ನೀರಜ್ ಚೋಪ್ರಾ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ
* ಫೈನಲ್‌ಗೂ ಮುನ್ನ ನಡೆದ ರೋಚಕ ಕಥೆಯನ್ನು ಬಿಚ್ಚಿಟ್ಟ ನೀರಜ್
* ನೀರಜ್ ಎಸೆಯಬೇಕಿದ್ದ ಜಾವೆಲಿನ್ ಪಾಕ್ ಅಥ್ಲೀಟ್ ಬಳಿಯಿತ್ತಂತೆ..!
ನವದೆಹಲಿ(ಆ.26): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಫೈನಲ್ ವೇಳೆ ನಡೆದ ಸ್ವಾರಸ್ಯಕರ ಪ್ರಸಂಗವೊಂದನ್ನು ಬಹಿರಂಗ ಪಡಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಜಾವಲಿನ್ ಥ್ರೋ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ನೀರಜ್ ಚೋಪ್ರಾ ಫೈನಲ್‌ಗೆ ಜಾವೆಲಿನ್ ಥ್ರೋ ಎಸೆಯಲು ಬಂದಾಗ, ಅವರ ಜಾವೆಲಿನ್ ನಾಪತ್ತೆಯಾಗಿತ್ತಂತೆ. ಸ್ವತಃ ಈ ವಿಚಾರವನ್ನು ನೀರಜ್ ಚೋಪ್ರಾ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹೀಗಿತ್ತು ನೋಡಿ ಆ ವಿಡಿಯೋ:
ಹೌದು, ಜಾವೆಲಿನ್ ಥ್ರೋ ಫೈನಲ್‌ನಲ್ಲಿನ ಮೊದಲ ಪ್ರಯತ್ನಕ್ಕೂ ಮುನ್ನ ತಮ್ಮ ಜಾವೆಲಿನ್‌ಗಾಗಿ ಹುಡುಕಾಟ ನಡೆಸಿದಾಗ, ಅದು ಪಾಕಿಸ್ತಾನದ ಜಾವೆಲಿನ್ ಥ್ರೋ ಪಟು ಆರ್ಶದ್ ನದೀಂ ಬಳಿಯಿತ್ತು ಎಂದು ನೀರಜ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 'ನಾನು ಜಾವೆಲಿನ್‌ಗಾಗಿ ಹುಡುಕಾಡುತ್ತಿದ್ದಾಗ ಅದು ನದೀಂ ಬಳಿಯಿತ್ತು. ಭಾಯ್ ಅದು ನನ್ನದು ಕೊಡಿ ಎಂದು ಕೇಳಿ ಪಡೆದು ಮೊದಲ ಯತ್ನವನ್ನು ಪೂರ್ಣಗೊಳಿಸಿದೆ ಎಂದಿದ್ದಾರೆ.
ನೀರಜ್ ಚೋಪ್ರಾ ತನ್ನ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದರೊಂದಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಒಲಿಂಪಿಕ್ಸ್ ಶತಮಾನದ ಬಳಿಕ ದೇಶಕ್ಕೆ ಪದಕ ಗೆದ್ದುಕೊಡುವಲ್ಲಿ ನೀರಜ್ ಯಶಸ್ವಿಯಾಗಿದ್ದರು. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳೊಂದಿಗೆ ಒಟ್ಟು 7 ಪದಕಗಳನ್ನು ಗೆದ್ದು ಹೊಸ ದಾಖಲೆ ನಿರ್ಮಿಸಿತ್ತು.