ಗ್ವಾಟೆಮಾಲಾ(ಏ.27): ಆರ್ಚರಿ ವಿಶ್ವಕಪ್‌ ಮೊದಲ ಸುತ್ತಿನಲ್ಲಿ ಭಾರತ 3 ಚಿನ್ನ ಸೇರಿ ಒಟ್ಟು 4 ಪದಕಗಳನ್ನು ಗೆದ್ದಿದೆ. ವಿಶ್ವಕಪ್‌ಗಳಲ್ಲಿ ಇದು ಭಾರತದ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನವಾಗಿದೆ. 

ವೈಯಕ್ತಿಕ ವಿಭಾಗಗಳಲ್ಲಿ ತಾರಾ ದಂಪತಿ ಅತನು ದಾಸ್‌ ಹಾಗೂ ದೀಪಿಕಾ ಕುಮಾರಿ ಚಿನ್ನದ ಪದಕ ಜಯಿಸಿ, ವಿಶ್ವಕಪ್‌ ಫೈನಲ್ಸ್‌ಗೆ ನೇರವಾಗಿ ಅರ್ಹತೆ ಪಡೆದರು. ದೀಪಿಕಾಗಿದು 3ನೇ ವಿಶ್ವಕಪ್‌ ಚಿನ್ನ, ಅತನು ಚೊಚ್ಚಲ ಬಾರಿಗೆ ವಿಶ್ವಕಪ್‌ ಪದಕ ಜಯಿಸಿದ್ದಾರೆ. ಇನ್ನು ಮಿಶ್ರ ತಂಡ ವಿಭಾಗದಲ್ಲಿ ಅತನು ಹಾಗೂ ಅಂಕಿತಾ ಜೋಡಿ ಕಂಚಿನ ಪದಕ ಜಯಿಸಿತು.

ಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್ ಟೋಕಿಯೋ ಒಲಿಂಪಿಕ್ಸ್‌ ಕನಸು ಭಗ್ನ!

ಈ ಮೊದಲು ನಡೆದ ಆರ್ಚರಿ ವಿಶ್ವಕಪ್‌ ಮೊದಲ ಸುತ್ತಿನಲ್ಲಿ ಭಾರತ ಮಹಿಳಾ ರೀಕರ್ವ್ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. ಭಾನುವಾರ(ಏ.25) ನಡೆದ ಫೈನಲ್‌ನಲ್ಲಿ ದೀಪಿಕಾ, ಅಂಕಿತಾ ಹಾಗೂ ಕೋಮಲಿಕಾ ಅವರಿದ್ದ ತಂಡ, ಮೆಕ್ಸಿಕೋ ವಿರುದ್ಧ ಶೂಟೌಟ್‌ನಲ್ಲಿ 5-4 ಅಂತರದಲ್ಲಿ ಗೆದ್ದು ಚಿನ್ನಕ್ಕೆ ಮುತ್ತಿಟ್ಟಿತು. ಭಾರತ ಮಹಿಳಾ ರೀಕರ್ವ್ ತಂಡ 2016ರ ಬಳಿಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು.