ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು ಶುಭಾರಂಭ
ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ದಿನವೇ ಭಾರತಕ್ಕೆ ಮಿಶ್ರಫಲ ಎದುರಾಗಿದ್ದು. ಪಿ.ವಿ. ಸಿಂಧು ಎರಡನೇ ಸುತ್ತಿಗೆ ಲಗ್ಗೆಯಿಟ್ಟರೆ, ಕಶ್ಯಪ್, ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಸೋಲುಂಡು ನಿರಾಸೆ ಅನುಭವಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬರ್ಮಿಂಗ್‌ಹ್ಯಾಮ್(ಮಾ.18): ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ತಾರಾ ಆಟಗಾರ್ತಿ ಪಿ.ವಿ. ಸಿಂಧು ಶುಭಾರಂಭ ಮಾಡಿದ್ದರೆ, ಕಿದಂಬಿ ಶ್ರೀಕಾಂತ್ ಹಾಗೂ ಪರುಪಳ್ಳಿ ಕಶ್ಯಪ್ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಂಧು, ಮಲೇಷ್ಯಾದ ಎಸ್.ಚೀಹ್ ವಿರುದ್ದ 21-11, 21-17 ನೇರ ಗೇಮ್‌ಗಳಲ್ಲಿ ಜಯ ಸಾಧಿಸಿದರು. ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪದಕದ ಭರವಸೆ ಮೂಡಿಸಿದ್ದ ಶ್ರೀಕಾಂತ್, ಐರ್ಲೆಂಡ್‌ನ ನ್ಗುಯೇನ್ ನಾತ್ ವಿರುದ್ಧ 11-21, 21-15, 12-21 ಅಂತರದಲ್ಲಿ ಸೋಲುಂಡರು. ಮೊದಲ ಸೆಟ್‌ನಲ್ಲಿ ಸೋಲುಂಡ ಕಿದಂಬಿ, 2ನೇ ಸೆಟ್‌ನಲ್ಲಿ ಎದುರಾಳಿಗೆ ತಕ್ಕ ತಿರುಗೇಟು ನೀಡಿದರು. 3ನೇ ಸೆಟ್‌ನಲ್ಲಿ ಫಿನಿಕ್ಸ್‌ನಂತೆ ಮೇಲೆದ್ದ ನಾತ್, ಕಿದಂಬಿಗೆ ಪುಟಿಯಲ್ ಅವಕಾಶವನ್ನೇ ನೀಡಲಿಲ್ಲ.
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಭಾರತದ ಮೂವರು ಶಟ್ಲರ್‌ಗಳಿಗೆ ಕೊರೋನಾ ಪಾಸಿಟಿವ್..!
ಮತ್ತೊಂದು ಪಂದ್ಯದಲ್ಲಿ ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ ಕಶ್ಯಪ್, ಜಪಾನ್‌ನ ಕೆಂಟೆ ಮೊಮೊಟಾ ವಿರುದ್ಧ 13-21, 2-22 ಅಂತರದಲ್ಲಿ ಸೋಲುಂಡರು. ಜಪಾನ್ ಆಟಗಾರನ ಮೊನಚಾದ ಆಟದ ಮುಂದೆ ಕಶ್ಯಪ್ ಸೊಲ್ಲೆತ್ತಲೂ ಆಗಲಿಲ್ಲ. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್. ಸಿಕ್ಕಿರೆಡ್ಡಿ, ಥಾಯ್ಲೆಂಡ್‌ನ ಬೆನ್ಯಾಪಾ ಐಮ್‌ಸಾರ್ಡ್ ಮತ್ತು ನುಂಟಕರ್ನ್ ಐಮ್‌ಸಾರ್ಡ್ ವಿರುದ್ಧ 21-14, 21-12 ಅಂತರದಿಂದ ನೇರ ಸೋಲುಂಡರು.
5 ತಾಸು ತಡವಾಗಿ ಆರಂಭ:
ಕೆಲ ಆಟಗಾರರ ಕೋವಿಡ್ ವರದಿ ಬರುವುದು ತಡವಾದ ಕಾರಣ ಪಂದ್ಯಾವಳಿಯು ಸುಮಾರು 5 ತಾಸು ತಡವಾಗಿ ಆರಂಭಗೊಂಡಿತು. ಇನ್ನು ಭಾರತ ತಂಡದ ಮೂವರು ಆಟಗಾರರು ಹಾಗೂ ಕೋಚ್ ಒಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಆಯೋಜಕರು ಮಂಗಳವಾರ ತಿಳಿಸಿದ್ದರು. ಇದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದ್ದ ಕಾರಣ, ಆಟಗಾರರನ್ನು ಮರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಬುಧವಾರ ಬಂದ ಫಲಿತಾಂಶದಲ್ಲಿ ಯಾರಿಗೂ ಸೋಂಕಿಲ್ಲದಿರುವುದು ದೃಢಪಟ್ಟಿದ್ದು, ಟೂರ್ನಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.