ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಭಾರತದ ಮೂವರು ಶಟ್ಲರ್‌ಗಳಿಗೆ ಕೊರೋನಾ ಪಾಸಿಟಿವ್..!
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸಬೇಕಿದ್ದ ಭಾರತದ ಮೂವರು ಶಟ್ಲರ್‌ಗಳು ಸೇರಿ 4 ಮಂದಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬರ್ಮಿಂಗ್‌ಹ್ಯಾಮ್(ಮಾ.17): ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಭಾರತೀಯ ಶಟ್ಲರ್‌ಗಳಿಗೆ ಶಾಕ್ ಎದುರಾಗಿದ್ದು, ಮೂವರು ಆಟಗಾರರು ಕೋವಿಡ್ 19 ಸೋಂಕಿಗೆ ತುತ್ತಾಗಿರುವುದು ಖಚಿತವಾಗಿದೆ. ಇನ್ನು ಕೆಲವು ಟೆಸ್ಟ್ ವರದಿಗಳು ಹೊರಬರಬೇಕಿದ್ದು, ಭಾರತೀಯ ಶಟ್ಲರ್‌ಗಳು ಟೂರ್ನಿಯಲ್ಲಿ ಪಾಲ್ಗೊಳ್ಳುವಿಕೆಯ ಬಗ್ಗೆ ಅನುಮಾನದ ತೂಗುಗತ್ತಿ ನೇತಾಡಲಾರಂಭಿಸಿವೆ.
ನಮ್ಮ ಮೂವರು ಆಟಗಾರರು ಹಾಗೂ ಓರ್ವ ಸಹಾಯಕ ಸಿಬ್ಬಂದಿ ಸೇರಿದಂತೆ ನಾಲ್ಕು ಮಂದಿ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ. ಇವರಿಗೆಲ್ಲಾ ಸೋಂಕು ಹೇಗೆ ತಗುಲಿತು ಎನ್ನುವುದನ್ನು ಆದಷ್ಟು ಬೇಗ ಪತ್ತೆಹಚ್ಚಲಿದ್ದೇವೆ. ಕಳೆದ ಎರಡು ವಾರದ ಹಿಂದೆ ಆರಂಭವಾದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದಲೂ ನಾವು ಐಸೋಲೇಷನ್‌ನಲ್ಲಿದ್ದೇವೆ ಎಂದು ಭಾರತದ ಕೋಚ್ ದನೀಶ್ ಹಾಗೂ ವಿದೇಶಿ ಕೋಚ್ ಮಥೀಸ್ ಬೋಯಿ ತಿಳಿಸಿದ್ದಾರೆ.
ನಾವು ಕಳೆದ 14 ದಿನಗಳ ಪೈಕಿ 5 ಬಾರಿ ಕೋವಿಡ್ ಟೆಸ್ಟ್‌ಗೆ ಒಳಗಾಗಿದ್ದು, ಐದು ಬಾರಿಯೂ ನೆಗೆಟಿವ್ ಬಂದಿದೆ. ಇದಾದ ಬಳಿಕವೂ ನಾವೆಲ್ಲಾ ಒಟ್ಟೊಟ್ಟಿಗೆ ಇದ್ದೇವೆ. ಹೀಗಿದ್ದೂ ಕೊರೋನಾ ವಕ್ಕರಿಸಿದ್ದಾದರೂ ಹೇಗೆ? ಕೋವಿಡ್ 19 ಸೋಂಕಿಗೆ ಒಳಗಾದವರು ಯಾರೆಂದು ಇನ್ನು ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.
ಇಂದಿನಿಂದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಆರಂಭ; ಸಿಂಧು ಮೇಲೆ ನಿರೀಕ್ಷೆ
2015ರ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ರನ್ನರ್ ಅಪ್ ಸೈನಾ ನೆಹ್ವಾಲ್, ಜನವರಿಯಲ್ಲಿ ನಡೆದ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ವೇಳೆ ಕೊರೋನಾ ಪಾಸಿಟಿವ್ ವರದಿ ಬಂದಿತ್ತು. ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತ್ತೊಮ್ಮೆ ಟೆಸ್ಟ್ ನಡೆಸಿದಾಗ ಕೋವಿಡ್ 19 ವರದಿ ನೆಗೆಟಿವ್ ಬಂದಿತ್ತು.
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ ಆರಂಭಕ್ಕೂ ಮುನ್ನ ಕೋವಿಡ್ 19 ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಪಂದ್ಯಾವಳಿಗಳು ಕೆಲಕಾಲ ತಡವಾಗಿ ಆರಂಭವಾಗಲಿದೆ ಎಂದು ಆಯೋಜಕರು ಟ್ವೀಟ್ ಮೂಲಕ ತಿಳಿಸಿದ್ದಾರೆ.