ಸುಳ್ಳು ವಯಸ್ಸು ನೀಡಿ ಸಿಕ್ಕಿಬಿದ್ದ ಅಥ್ಲೀಟ್ಸ್!
ಕ್ರೀಡೆಯಲ್ಲಿ ಸುಳ್ಳು ವಯಸ್ಸು ನೀಡುವುದು ಗಂಭೀರ ಅಪರಾಧ. ಈ ಕುರಿತು ಕ್ರೀಡಾಪಟುಗಳಿಗೆ ಅರಿವು ಮೂಡಿಸಲಾಗುತ್ತಿದೆ. ಇದೀಗ ರಾಷ್ಟ್ರೀಯ ಅಂತರ ಜಿಲ್ಲಾ ಕಿರಿಯರ ಕೂಟದಲ್ಲಿ ಸುಳ್ಳು ವಯಸ್ಸು ನೀಡಿದ 51 ಕ್ರೀಡಾಪಟುಗಳನ್ನು ಅಮಾನತು ಮಾಡಲಾಗಿದೆ.
ನವದೆಹಲಿ(ಡಿ.21): ಅಥ್ಲೆಟಿಕ್ಸ್‌ನಲ್ಲಿ ಸುಳ್ಳು ವಯಸ್ಸು ಹೇಳಿ ಅವಕಾಶ ಗಿಟ್ಟಿಸಿಕೊಳ್ಳುವ ಖಯಾಲಿ ಮುಂದುವರಿದಿದೆ. ಕಳೆದ ತಿಂಗಳು ತಿರುಪತಿಯಲ್ಲಿ ನಡೆದ ರಾಷ್ಟ್ರೀಯ ಅಂತರ ಜಿಲ್ಲಾ ಕಿರಿಯರ ಕೂಟದಲ್ಲಿ 51 ಮಂದಿ ಅಥ್ಲೀಟ್‌ಗಳು ವಯೋಮಿತಿ ವಂಚನೆ ನಡೆಸಿರುವ ಕಾರಣದಿಂದ ಅಂತಿಮ ಹಂತದಲ್ಲಿ ಅವಕಾಶ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಅಥ್ಲೆಟಿಕ್ಸ್ : ದಾಖಲೆ ಬರೆದ ಅಥ್ಲೀಟ್ ದ್ಯುತಿ ಚಾಂದ್
ಇದಲ್ಲದೇ, 169 ಮಂದಿ ವಯಸ್ಸಿನ ದಾಖಲೆಗಳ ಪರಿಶೀಲನಾ ಪ್ರಕ್ರಿಯೆಯಿಂದಲೇ ದೂರವುಳಿದಿರುವ ಪ್ರಕರಣಗಳು ನಡೆದಿವೆ. ವಿಶ್ವದಲ್ಲೇ ಅತಿದೊಡ್ಡ ಪ್ರಮಾಣದ ಪ್ರತಿಭಾನ್ವೇಷಣಾ ಕೂಟದಲ್ಲಿ ಇಂಥ ಪ್ರಕರಣಗಳು ನಡೆದಿರುವುದು ತಲೆತಗ್ಗಿಸುವಂತಾಗಿದೆ.
ಇದನ್ನೂ ಓದಿ: ಗುಡ್ ನ್ಯೂಸ್ ! 2020 ಒಲಿಂಪಿಕ್ಸ್‌ಗೆ ಭಾರತ ರಿಲೇ ತಂಡ!.
ವಯಸ್ಸು ಪರಿಶೀಲನೆಗಾಗಿ ಮೊದಲು ಅಥ್ಲೀಟ್‌ಗಳನ್ನು ದಂತ ಪರೀಕ್ಷೆಗೊಳಪಡಿಸಲಾಗುತ್ತದೆ. ಅಥ್ಲೀಟ್ ಎಷ್ಟುಹಲ್ಲುಗಳನ್ನು ಹೊಂದಿದ್ದಾರೆ ಎನ್ನುವುದರ ಮೇಲೆ ವಯಸ್ಸಿನ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಅಗತ್ಯವೆನಿಸಿದಲ್ಲಿ ಮುಂದಿನ ಹಂತದ ಪರೀಕ್ಷೆಗೆ ಒಳಪಡಿಸಿ ಅಥ್ಲೀಟ್‌ಗಳ ನಿಖರ ವಯಸ್ಸು ಪತ್ತೆ ಮಾಡಿಕೊಳ್ಳಲಾಗುತ್ತದೆ ಎಂದು ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆಯ ವಯಸ್ಸು ಪರಿಶೀಲನಾ ವಿಭಾಗದ ಮುಖ್ಯಸ್ಥ ರಾಜೀವ್ ಕಾರ್ತಿ ತಿಳಿಸಿದ್ದಾರೆ. ನವೆಂಬರ್ 24ರಿಂದ 26ರ ತನಕ ನಡೆದ ತಿರುಪತಿಯಲ್ಲಿ ನಡೆದ ಈ ಕೂಟದ 14ರ ವಯೋಮಿತಿ ಹಾಗೂ 16ರ ವಯೋಮಿತಿ ವಿಭಾಗದಲ್ಲಿ ಒಟ್ಟು 4500 ಬಾಲಕ-ಬಾಲಕಿಯರು ಪಾಲ್ಗೊಂಡಿದ್ದರು.