ನವದೆಹಲಿ(ಏ.01): ಪಂಜಾಬ್‌ನ ಪಟಿಯಾಲಾದಲ್ಲಿರುವ ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್‌)ನಲ್ಲಿ ಅಭ್ಯಾಸ ನಡೆಸುತ್ತಿರುವ 26 ಕ್ರೀಡಾಪಟುಗಳಿಗೆ, ಸಹಾಯಕ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. 

313 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ಆ ಪೈಕಿ 26 ಮಂದಿಯ ವರದಿ ಪಾಸಿಟಿವ್‌ ಎಂದು ಬಂದಿದೆ. ಸೋಂಕಿತರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದ್ದು, ಕ್ಯಾಂಪಸ್‌ ಸ್ಯಾನಿಟೈಸ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಪುರುಷರ ಬಾಕ್ಸಿಂಗ್‌ ಮುಖ್ಯ ಕೋಚ್‌ ಸಿ.ಎ.ಕುಟ್ಟಪ್ಪ ಹಾಗೂ ಶಾಟ್‌ ಪುಟ್‌ ಕೋಚ್‌ ಮೊಹೀಂದರ್ ಸಿಂಗ್‌ ದಿಲ್ಲೋನ್‌ಗೆ ಕೋವಿಡ್‌ 19 ಸೋಂಕು ತಗುಲಿರುವುದಾಗಿ ಸಾಯ್‌ ಮೂಲಗಳು ಖಚಿತಪಡಿಸಿವೆ.

ಹರ್ಮನ್‌ಪ್ರೀತ್‌ ಕೌರ್‌ಗೂ ವಕ್ಕರಿಸಿದ ಕೊರೋನಾ ಹೆಮ್ಮಾರಿ..!

ಸೋಂಕಿತರ ಪೈಕಿ ಯಾರೂ ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದ್ದವರಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದ ನಾಲ್ವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಎನ್‌ಐಎಸ್‌ ಪಟಿಯಾಲದಲ್ಲಿ ಕೋವಿಡ್‌ ಸೋಂಕಿಗೆ ಒಳಗಾದ ಪ್ರಮುಖ ಅಥ್ಲೀಟ್‌ಗಳಲ್ಲಿ ಏಷ್ಯನ್‌ ಬಾಕ್ಸಿಂಗ್‌ ಗೇಮ್ಸ್‌ ಬೆಳ್ಳಿ ಪದಕ ದೀಪಕ್‌ ಕುಮಾರ್, ಇಂಡಿಯಾ ಓಪನ್‌ ಚಿನ್ನದ ಪದಕ ವಿಜೇತ ಸಂಜಿತ್‌ ಪ್ರಮುಖರಾಗಿದ್ದಾರೆ.