ನವದೆಹಲಿ(ಮಾ.30): ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳನ್ನು ಕೊರೋನಾ ಹೆಮ್ಮಾರಿ ಇನ್ನಿಲ್ಲದಂತೆ ಕಾಡಲಾರಂಭಿಸಿದೆ. ಭಾರತ ಮಹಿಳಾ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಭಾರತ ತಂಡದ ಸ್ಟಾರ್ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಹರ್ಮನ್‌ಪ್ರೀತ್ ಕೌರ್‌ಗೆ ಕೊಂಚ ರೋಗದ ಲಕ್ಷಣಗಳು ಕಂಡುಬಂದಿವೆ.

ಹೌದು, ಹರ್ಮನ್‌ಪ್ರೀತ್‌ ಕೌರ್‌ಗೆ ಸಣ್ಣಗೆ ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದು, ಆಕೆಗೆ ಸೋಂಕು ತಗುಲಿರುವ ವಿಚಾರ ದೃಢಪಟ್ಟಿದೆ. 32 ವರ್ಷದ ಕೌರ್‌ ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. 5 ಪಂದ್ಯಗಳ ಏಕದಿನ ಸರಣಿಯಲ್ಲಿ 53ಕ್ಕೂ ಹೆಚ್ಚಿನ ಸರಾಸರಿಯಲ್ಲಿ 160 ರನ್‌ ಬಾರಿಸಿದ್ದರು. ಹೀಗಿದ್ದು ಭಾರತ ತಂಡವು 1-4 ಅಂತರದಲ್ಲಿ ಹರಿಣಗಳ ಪಡೆಗೆ ಶರಣಾಗಿತ್ತು. ಇನ್ನು 5ನೇ ಏಕದಿನ ಪಂದ್ಯದ ವೇಳೆ ಹರ್ಮನ್‌ಪ್ರೀತ್‌ ಕೌರ್ ಗಾಯಗೊಂಡಿದ್ದರಿಂದಾಗಿ ಟಿ20 ಸರಣಿಯಿಂದ ಹೊರಬಿದ್ದಿದ್ದರು. 

ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ಗೆ ಕೊರೋನಾ ಸೋಂಕು!

ಭಾರತೀಯ ಕ್ರಿಕೆಟ್‌ನಲ್ಲಿ ಕೋವಿಡ್‌ಗೆ ತುತ್ತಾಗುತ್ತಿರುವವರ ಪಟ್ಟಿ ಸಾಕಷ್ಟು ದೊಡ್ಡದೇ ಇದೆ. ಇತ್ತೀಚೆಗಷ್ಟೇ ಮುಕ್ತಾಯವಾದ ರೋಡ್ ಸೇಫ್ಟಿ ಸೀರೀಸ್‌ನಲ್ಲಿ ಪಾಲ್ಗೊಂಡಿದ್ದ ಇಂಡಿಯಾ ಲೆಜೆಂಡ್ಸ್‌ ತಂಡದ ನಾಯಕ ಸಚಿನ್ ತೆಂಡುಕ್ಕರ್, ಯೂಸುಫ್ ಪಠಾಣ್, ಎಸ್‌. ಬದ್ರನಾಥ್, ಇರ್ಫಾನ್‌ ಪಠಾಣ್‌ ಸದ್ಯ ಕೋವಿಡ್‌ ವಕ್ಕರಿಸಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಇದೀಗ ಆ ಪಟ್ಟಿಗೆ ಹರ್ಮನ್‌ಪ್ರೀತ್ ಕೌರ್ ಕೂಡಾ ಸೇರ್ಪಡೆಯಾಗಿದ್ದಾರೆ.