ಭಾರೀ ನಗದು ದಾನ ಮಾಡಿ ಗಮನ ಸೆಳೆಯುವ ಸಚಿವ ಜಮೀರ್‌ ಅಹ್ಮದ್‌ ಗುರುವಾರ ಮಂಗಳೂರಿನಲ್ಲೂ ಇದನ್ನು ಮುಂದುವರಿಸಿದ್ದಾರೆ. ಹೋಟೆಲ್  ಬಾಣಸಿಗನೋರ್ವನಿಗೆ ಭರ್ಜರಿ ಗಿಫ್ಟ್ ಒಂದನ್ನು ನೀಡಿದ್ದಾರೆ.  

ಮಂಗಳೂರು : ಹೋದಲ್ಲೆಲ್ಲ ಭಾರೀ ನಗದು ದಾನ ಮಾಡಿ ಗಮನ ಸೆಳೆಯುವ ಸಚಿವ ಜಮೀರ್‌ ಅಹ್ಮದ್‌ ಗುರುವಾರ ಮಂಗಳೂರಿನಲ್ಲೂ ಇದನ್ನು ಮುಂದುವರಿಸಿದ್ದಾರೆ. 

ನಗರದ ಹೋಟೆಲ್‌ವೊಂದರಲ್ಲಿ ರುಚಿಕರ ಮೀನು ಖಾದ್ಯ ತಯಾರಿಸಿದ ಬಾಣಸಿಗರೊಬ್ಬರಿಗೆ ಮೆಕ್ಕಾ ಯಾತ್ರೆಯ ಖರ್ಚು ವೆಚ್ಚ ನೋಡಿಕೊಳ್ಳುವ ಭರವಸೆ ನೀಡಿದರಲ್ಲದೆ, ಹೋಟೆಲ್‌ ಸಿಬ್ಬಂದಿಗೆ ದುಬಾರಿ ಟಿಪ್ಸನ್ನೂ ನೀಡಿದ್ದಾರೆ. ಜಮೀರ್‌ ಮಂಗಳೂರಿನಲ್ಲಿ ಗುರುವಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಧ್ಯಾಹ್ನದ ಊಟಕ್ಕೆ ನಗರದ ಕಂಕನಾಡಿ ಲೋವರ್‌ ಬೆಂದೂರ್‌ವೆಲ್‌ನಲ್ಲಿರುವ ‘ಫಿಶ್‌ ಮಾರ್ಕೆಟ್‌’ ಸೀಫುಡ್‌ ರೆಸ್ಟೋರೆಂಟ್‌ಗೆ ತೆರಳಿದ್ದರು. 

ಅಲ್ಲಿ ತಮ್ಮ ಪರಿಚಿತರೊಂದಿಗೆ ಅಂಜಲ್‌, ಮಾಂಜಿ ಮೀನು, ಸಿಗಡಿ, ನೀರುದೋಸೆ, ಕಲ್ತಪ್ಪ ಸವಿದರು. ಈ ಖಾದ್ಯಗಳ ರುಚಿಗೆ ಫಿದಾ ಆದ ಅವರು ಅದನ್ನು ತಯಾರಿಸಿದ ಹೋಟೆಲ್‌ನ ಬಾಣಸಿಗ ಬೋಳಿಯಾರ್‌ನ ಹನೀಫ್‌ ಅವರನ್ನು ಬಳಿ ಕರೆದು, ಅವರಿಗೆ ಪವಿತ್ರ ಮೆಕ್ಕಾ ಯಾತ್ರೆಯ ಖರ್ಚು ವೆಚ್ಚ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಮಾತ್ರವಲ್ಲದೆ, ಊಟ ಮಾಡಿದ ಬಳಿಕ ಹೊಟೇಲ್‌ನಲ್ಲಿರುವ ಎಲ್ಲ ಸಿಬ್ಬಂದಿಯನ್ನು ಬಳಿ ಕರೆದು 25 ಸಾವಿರ ರು. ಟಿಫ್ಸ್‌ ನೀಡಿ, ಹಂಚಿಕೊಳ್ಳುವಂತೆ ತಿಳಿಸಿದರು.

ಹುಲಿ ವೇಷಕ್ಕೆ 50 ಸಾವಿರ:  ಬಳಿಕ ನಗರದ ಮಣ್ಣಗುಡ್ಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ರೈ ನೇತೃತ್ವದಲ್ಲಿ ನಡೆಯುತ್ತಿದ್ದ ಪಿಲಿನಲಿಕೆ (ನವರಾತ್ರಿ ಹುಲಿ ಕುಣಿತ) ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಹುಲಿ ವೇಷ ತಂಡಗಳ ಆಕರ್ಷಕ ಕುಣಿತವನ್ನು ವೀಕ್ಷಿಸಿದರು. ಬಳಿಕ ಪ್ರಥಮ ಬಹುಮಾನ ಪಡೆದ ತಂಡಕ್ಕೆ 50 ಸಾವಿರ ನಗದು ಬಹುಮಾನ ನೀಡಿದರು.