ಸಾರ್ವಜನಿಕವಾಗಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ ಕಿಡಿಗೇಡಿಯೊಬ್ಬನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಮಲ್ಲೇಶ್ವರದಲ್ಲಿ ನಡೆದಿದೆ.

ಬೆಂಗಳೂರು: ಸಾರ್ವಜನಿಕವಾಗಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ ಕಿಡಿಗೇಡಿಯೊಬ್ಬನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಮಲ್ಲೇಶ್ವರದಲ್ಲಿ ನಡೆದಿದೆ.

ವೈಯಾಲಿಕಾವಲ್ 6ನೇ ಕ್ರಾಸ್ ನಿವಾಸಿ ಪ್ರಶಾಂತ್‌ಕುಮಾರ್ ಬಂಧಿತ. ಸೋಮವಾರ ರಾತ್ರಿ ಗೆಳತಿ ಜತೆ ಹೋಗುತ್ತಿದ್ದ ಸಂತ್ರಸ್ತೆ ಎದೆ ಮುಟ್ಟಿ ಅನುಚಿತವಾಗಿ ಆರೋಪಿ ನಡೆದುಕೊಂಡಿದ್ದಾನೆ. ಆಗ ರಕ್ಷಣೆಗೆ ಯುವತಿ ಕೂಗಿಕೊಂಡಾಗ ಧಾವಿಸಿದ ಸ್ಥಳೀಯರು, ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ಪ್ರಶಾಂತ್‌ನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.

ತಕ್ಷಣವೇ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಮಲ್ಲೇಶ್ವರ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ಮೂಗನಾಗಿದ್ದು, ತನ್ನ ಸೋದರನ ಐಸ್ ಕ್ರೀಂ ಮಾರಾಟ ಮಳಿಗೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಾನೆ.

ರಾತ್ರಿ ಮಲ್ಲೇಶ್ವರ 9ನೇ ಕ್ರಾಸ್‌ನಲ್ಲಿ ಬೈಕ್‌ನಲ್ಲಿ ಬಂದ ಪ್ರಶಾಂತ್, ತನ್ನ ಎದುರಿಗೆ ಬರುತ್ತಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.