ನವದೆಹಲಿ: ಬ್ಯಾಂಕಿಂಗ್‌ ವ್ಯವಸ್ಥೆ ಡಿಜಿಟಲೀಕರಣಗೊಂಡ ಬಳಿಕ ಒಂದಲ್ಲಾ ಒಂದು ಹೆಸರಲ್ಲಿ ಗ್ರಾಹಕರಿಗೆ ಶುಲ್ಕ ವಿಧಿಸುತ್ತಿರುವ ಬ್ಯಾಂಕ್‌ಗಳು ಇನ್ನು ಮುಂದೆ, ಎಟಿಎಂ ವ್ಯವಹಾರ ಮತ್ತು ಚೆಕ್‌ಗಳಿಗೂ ಶುಲ್ಕ ವಿಧಿಸುವ ಸಾಧ್ಯತೆ ಇದೆ. ಇದಕ್ಕೆಲ್ಲಾ ಕಾರಣವಾಗಿರುವುದು, ಗ್ರಾಹಕರಿಗೆ ನೀವು ನೀಡುತ್ತಿರುವ ಉಚಿತ ಸೇವೆಗಳಿಗೆ ಸಂಬಂಧಿಸಿದಂತೆ ಕಳೆದ 5 ವರ್ಷಗಳ ಸೇವಾ ತೆರಿಗೆ ಪಾವತಿ ಮಾಡಿ ಎಂದು ಬ್ಯಾಂಕ್‌ಗಳಿಗೆ ತೆರಿಗೆ ಇಲಾಖೆಯು ನೋಟಿಸ್‌ ಜಾರಿ ಮಾಡಿರುವುದು. ಒಂದು ವೇಳೆ ಬ್ಯಾಂಕ್‌ಗಳು ಈ ತೆರಿಗೆ ಪಾವತಿ ಮಾಡುವುದು ಕಡ್ಡಾಯವಾದಲ್ಲಿ, ಅವು ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದು ಖಚಿತ ಎನ್ನಲಾಗಿದೆ.

ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ, ಆ್ಯಕ್ಸಿಸ್‌, ಕೊಟಕ್‌ ಮಹಿಂದ್ರಾ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಬ್ಯಾಂಕುಗಳಿಗೆ ಸರಕು ಮತ್ತು ಸೇವಾ ತೆರಿಗೆ ವಿಚಕ್ಷಣ ಮಹಾನಿರ್ದೇಶನಾಲಯ (ಡಿಜಿಜಿಎಸ್‌ಟಿ) ಇತ್ತೀಚೆಗೆ ಸೇವಾ ತೆರಿಗೆ ಪಾವತಿಸುವಂತೆ ಸೂಚಿಸಿ ನೋಟಿಸ್‌ ನೀಡಿದೆ. ಮೂಲಗಳ ಪ್ರಕಾರ ಒಟ್ಟು 6000 ಕೋಟಿ ರು. ತೆರಿಗೆ ಪಾವತಿಸುವಂತೆ ನೋಟಿಸ್‌ ಜಾರಿಯಾಗಿದೆ ಎನ್ನಲಾಗಿದೆ.

ಈ ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಬ್ಯಾಂಕುಗಳು ಸರ್ಕಾರದ ಮೊರೆ ಹೋಗುವುದೂ ಸೇರಿದಂತೆ ಎಲ್ಲಾ ಮಾರ್ಗಗಳನ್ನು ಪ್ರಯತ್ನಿಸಲಿವೆ. ಆದರೂ ತೆರಿಗೆ ಪಾವತಿಸಬೇಕಾಗಿ ಬಂದರೆ ಎಟಿಎಂ ವ್ಯವಹಾರ, ಚೆಕ್‌ ಬುಕ್‌, ಡೆಬಿಟ್‌ ಕಾರ್ಡ್‌ ಮುಂತಾದವುಗಳಿಗೆ ಶುಲ್ಕ ವಿಧಿಸಲು ಆರಂಭಿಸುವ ಸಾಧ್ಯತೆಯಿದೆ.

ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇರಿಸದಿರುವ ಗ್ರಾಹಕರಿಗೆ ಬ್ಯಾಂಕುಗಳು ಎಷ್ಟುಶುಲ್ಕ ವಿಧಿಸುತ್ತವೆಯೋ ಅಷ್ಟುಶುಲ್ಕವನ್ನು ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇರಿಸಿದ ಗ್ರಾಹಕರಿಗೆ ನೀಡಿದ ಉಚಿತ ಸೇವೆಗಳಿಗೆ ಬ್ಯಾಂಕ್‌ ಪಡೆದಿದೆ ಎಂದು ತೆರಿಗೆ ಇಲಾಖೆ ಭಾವಿಸಿದೆ. ಹೀಗಾಗಿ ಗ್ರಾಹಕರಿಂದ ಪಡೆದ ಹಣಕ್ಕೆ ಸೇವಾ ತೆರಿಗೆ ಪಾವತಿಸಿ ಎಂದು ತೆರಿಗೆ ಇಲಾಖೆ ಬ್ಯಾಂಕ್‌ಗಳಿಗೆ ಸೂಚಿಸಿದೆ. ಸೇವಾ ತೆರಿಗೆಯನ್ನು 5 ವರ್ಷಗಳ ಹಿಂದಿನಿಂದ ವಿಧಿಸಲು ಇಲಾಖೆಗೆ ಅಧಿಕಾರವಿದ್ದು, ಈ ಹಿನ್ನೆಲೆಯಲ್ಲಿ, ಜಿಎಸ್‌ಟಿ ಇತ್ತೀಚೆಗೆ ಜಾರಿಗೆ ಬಂದಿದ್ದರೂ, 5 ವರ್ಷದ ಹಿಂದಿನಿಂದ ಸೇವಾ ತೆರಿಗೆ ಪಾವತಿಸುವಂತೆ ತೆರಿಗೆ ಇಲಾಖೆ ನೋಟಿಸ್‌ ನೀಡಿದೆ.

ನಿರ್ದಿಷ್ಟಸಂಖ್ಯೆಯ ಮಿತಿಯ ಬಳಿಕದ ಎಟಿಎಂ ವ್ಯವಹಾರ, ಚೆಕ್‌ಬುಕ್‌, ಡೆಬಿಟ್‌ ಕಾರ್ಡ್‌ ಮೊದಲಾದವುಗಳು ಬ್ಯಾಂಕ್‌ಗಳ ಶುಲ್ಕ ಆಧರಿತ ವ್ಯಾಪ್ತಿಗೆ ಸೇರಿವೆ. ಆದರೆ ಆಯ್ದ ಗ್ರಾಹಕರಿಗೆ ಅಂದರೆ ಕನಿಷ್ಠ ಶಿಲ್ಕು ಕಾಪಾಡುವ ಗ್ರಾಹಕರಿಗೆ ಇಂಥ ಶುಲ್ಕದಿಂದ ಬ್ಯಾಂಕ್‌ಗಳು ವಿನಾಯ್ತಿ ನೀಡುತ್ತವೆ. ಅಂದರೆ ಉಚಿತವಾಗಿ ಸೇವೆ ನೀಡುತ್ತವೆ.