ಬೆಂಗಳೂರು(ಜು.23): ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಲ್ಲದೇ ಮಧ್ಯಸ್ಥಿಕೆಗಾಗಿ ಭಾರತದ ಪ್ರಧಾನಿ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ ಎಂದು ಸುಳ್ಳಿನ ಕತೆಯೊಂದನ್ನು ಹೆಣೆದಿದ್ದಾರೆ.

ಇರಲಿ, ತಾನು ವಿಶ್ವದ ದೊಡ್ಡಣ್ಣ ಎಂಬ ಅಮೆರಿಕದ ದುರಹಂಕಾರ ಮತ್ತು ಅದರ ಅಧ್ಯಕ್ಷ ತಾನೆಂಬ ಗರ್ವ ಡೋನಾಲ್ಡ್ ಟ್ರಂಪ್ ಅವರಿಂದ ಇಂತದ್ದೊಂದು ಹೇಳಿಕೆ ಕೊಡಿಸಿರಲಿಕ್ಕೆ ಸಾಕು.

ಅಮೆರಿಕವೇ ಹಾಗೆ, ಜಗತ್ತಿನ ಎಲ್ಲ ಸಮಸ್ಯೆಗಳಿಗೂ ತನ್ನ ಬಳಿ ಪರಿಹಾರ ಇದೆ ಎಂದು ಭಾವಿಸಿರುವ ದೇಶ ಅದು. ತನ್ನ ಸ್ವಂತ ನೆಲದಲ್ಲಿ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿರುವ ಅಮೆರಿಕ, ಭೂಮಂಡಲದ ಮತ್ತೊಂದು ಭಾಗದ ಸಮಸ್ಯೆ ಪರಿಹರಿಸಲು ಹಾತೋರೆಯುತ್ತದೆ.

ಜಮ್ಮು ಮತ್ತು ಕಾಶ್ಮೀರದ ಸಮಸ್ಯೆ ಭಾರತ-ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಮಸ್ಯೆಯಾಗಿದ್ದು, ಇದನ್ನು ದ್ವಿಪಕ್ಷೀಯವಾಗಿಯೇ ಪರಿಹರಿಸಿಕೊಳ್ಳುವುದಾಗಿ ಭಾರತ ಘೋಷಿಸಿ ದಶಕಗಳೇ ಕಳೆದಿವೆ.

ಆದರೆ ಭಾರತವನ್ನು ಎದುರಿಸಲಾಗದ ಪಾಕಿಸ್ತಾನ ಮಾತ್ರ ಆಗಾಗ ಅಮೆರಿಕದ ಮುಂದೆ ಮಧ್ಯಸ್ಥಿಕೆಗಾಗಿ ಮಂಡಿಯೂರುತ್ತದೆ. ಅಮೆರಿಕದ ಹಿಂದಿನ ಅಧ್ಯಕ್ಷರೆಲ್ಲಾ ನಮಗ್ಯಾಕೆ ಈ ಉಸಾಬರಿ ಎಂದು ಸುಮ್ಮನಿರುತ್ತಿದ್ದರು. ಆದರೆ ತಮ್ಮನ್ನು ಸೂಪರ್ ಮ್ಯಾನ್ ಎಂದು ಭಾವಿಸಿರುವ ಟ್ರಂಪ್ ಐ ಆಮ್ ರೆಡಿ ಎಂದು ಸೂಟು ಬೂಟು ಧರಿಸಿ ಕ್ಯಾಮರಾ ಮುಂದೆ ಪೋಸು ಕೊಟ್ಟಿದ್ದಾರೆ.

ಟ್ರಂಪ್ ಮೆಕ್ಸಿಕೋ ಗಮನಿಸಿ:

ಕಾಶ್ಮೀರ ವಿವಾದ ಬಗೆಹರಿಸುತ್ತೇನೆ ಎಂದು ಬಂದಿರುವ ಟ್ರಂಪ್ ನೋಡಿ ಪ್ರತಿಯೊಬ್ಬ ಭಾರತೀಯ ನಗುತ್ತಿದ್ದಾನೆ. ಅಕ್ರಮ ನುಸುಳುಕೋರ(?)ರಿಂದ ತನ್ನ ಗಡಿ ಸಂಭಾಳಿಸಲಾಗದ ಟ್ರಂಪ್, ಅಮೆರಿಕ-ಮೆಕ್ಸಿಕೋ ಗಡಿಗುಂಟ ಗೋಡೆ ಕಟ್ಟುತ್ತೇನೆ ಎಂದು ಹೇಳಿ ಚಂದಾ ಎತ್ತುತ್ತಿದ್ದಾರೆ.

ಮೆಕ್ಸಿಕೋದಿಂದ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ವಲಸಿಗರನ್ನು ತಡೆಯಲು ಅಮೆರಿಕಕ್ಕೆ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಕೊಲಂಬಿಯಾ, ಮೆಕ್ಸಿಕೋ, ಈಕ್ವೆಡಾರ್ ಮುಂತಾದ ದೇಶಗಳಿಂದ ಅಕ್ರಮವಾಗಿ ತನ್ನ ನೆಲಕ್ಕೆ ಬರುವ ಮಾದಕ ವಸ್ತುಗಳನ್ನು ತಡೆಯಲು ಜಗತ್ತಿನ ದೊಡ್ಡಣ್ಣನಿಗೆ ಇದುವರೆಗೂ ಸಾಧ್ಯವಾಗಿಲ್ಲ.

ಅಕ್ರಮ ಮಾದಕ ವಸ್ತು ಕಳ್ಳಸಾಗಾಣೆ ಅಮೆರಿಕದ ಯುವ ಸಮುದಾಯವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಹದಿಹರೆಯದ ಗರ್ಭಧಾರಣೆ ಅಮೆರಿಕವನ್ನು ಬೆಚ್ಚಿ ಬೀಳಿಸಿದೆ. ಅಕ್ರಮ ನುಸುಳುಕೋರರು ಹಾಗೂ ನೈಜ ವಲಸಿಗರನ್ನು ಗುರುತಿಸಲಾಗದೇ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಾ ಟ್ರಂಪ್ ಕಾಲ ಕಳೆಯುತ್ತಿದ್ದಾರೆ.

ವಿಜ್ಞಾನ, ತಂತ್ರಜ್ಞಾನ ಸೇರಿದಂರೆ ಎಲ್ಲ ಕ್ಷೇತ್ರಗಳಲ್ಲಿ ವಿದೇಶೀ ಜ್ಞಾನದ ಮೇಲೆ ಅವಲಂಬಿತವಾಗಿರುವ ಅಮೆರಿಕ, ವಿಶ್ವದ ಇತರ ರಾಷ್ಟ್ರಗಳ ಸಮಸ್ಯೆ ಬಗೆಹರಿಸಲು ಓಡೋಡಿ ಬರುವುದು ನಿಜಕ್ಕೂ ಹಾಸ್ಯಾಸ್ಪದ.

ಜಮ್ಮು ಮತ್ತು ಕಾಶ್ಮೀರ ಉಪಖಂಡದ ರಡು ರಾಷ್ಟ್ರಗಳ ನಡುವಿನ ಸಮಸ್ಯೆಯಾಗಿದ್ದು, ಈ ಸಮಸ್ಯೆಯನ್ನು ಭವಿಷ್ಯದಲ್ಲಿ ಈ ಎರಡೂ ರಾಷ್ಟ್ರಗಳೇ ಬಗೆಹರಿಸಿಕೊಳ್ಳಲಿವೆ. ಭಾರತಕ್ಕೆ ಈ ಕುರಿತು ತನ್ನ ಶಕ್ತಿ ಮೇಲೆ ಸಂಪೂರ್ಣ ನಂಬಿಕೆ ಇದೆ.

ಹೀಗಾಗಿ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಅಮೆರಿಕವೂ ಸೇರಿದಂತೆ ವಿಶ್ವದ ಯಾವುದೇ ರಾಷ್ಟ್ರದ ಮಧ್ಯಸ್ಥಿಕೆ ಭಾರತಕ್ಕೆ ಬೇಕಿಲ್ಲ, ಟ್ರಂಪ್ ನೀವು ಮೆಕ್ಸಿಕೋ ಸಂಭಾಳಿಸುವುದು ಒಳಿತು.