ನವದೆಹಲಿ(ಜು.23): ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆಗೆ ಭಾರತದ ಪ್ರಧಾನಿ ತಮ್ಮಲ್ಲಿ ಮನವಿ ಮಾಡಿದ್ದಾರೆ ಎಂಬ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿಕೆಯನ್ನು ಕೇಂದ್ರ ಸರ್ಕಾರ ತೀವ್ರವಾಗಿ ಖಂಡಿಸಿದೆ.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ನಿಲುವು ಸ್ಪಷ್ಟವಾಗಿದ್ದು, ಭಾರತಕ್ಕೆ ಯಾರ ಮಧ್ಯಸ್ಥಿಕೆಯ ಅವಶ್ಯಕತೆಯೂ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಮಧ್ಯಸ್ಥಿಕೆಗಾಗಿ ಆಗ್ರಹಿಸಿ ಭಾರತದಿಂದ ಯಾವುದೇ ಮನವಿ ಸಲ್ಲಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಕಾಶ್ಮೀರ ವಿವಾದ ಪರಿಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಡೋನಾಲ್ಡ್ ಟ್ರಂಪ್ ಅವರನ್ನು ಕೋರಿದ್ದರು. ಇದಕ್ಕೆ ಪ್ರತಿಕ್ರಿಸಿದ್ದ ಟ್ರಂಪ್, ಭಾರತದ ಪ್ರಧಾನಿ ಮೋದಿ ಕೂಡ ಇಂತದ್ದೇ ಮನವಿ ಮಾಡಿದ್ದು, ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದ್ದರು.

ಸದ್ಯ ಟ್ರಂಪ್ ಹೇಳಿಕೆ ಭಾರತದಲ್ಲಿ ತೀವ್ರ ರಾಜಕೀಯ ವಿವಾದ ಸೃಷ್ಟಿಸಿದ್ದು, ಟ್ರಂಪ್ ಹೇಳಿಕೆ ಕುರಿತು ಖುದ್ದು ಪ್ರಧಾನಿ ಮೋದಿ ಸ್ಪಷ್ಟನೆ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿವೆ.

ಈ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಶ್ಮೀರ ವಿವಾದಕ್ಕೆ ಸಂಬಂದಿಸಿದಂತೆ ಭಾರತದ ನೀತಿ ಸ್ಪಷ್ಟವಾಗಿದ್ದು, ಈ ಮೊದಲಿನ ನಿಲುವಿಗೆ ಪ್ರಧಾನಿ ಚ್ಯುತಿ ತಂದಹಾಗೆ ಭಾಸವಾಗುತ್ತಿದೆ. ಪ್ರಧಾನಿ ಮೋದಿ ಕೂಡಲೇ ಈ ಕುರಿತು ದೇಶಕ್ಕೆ ಸ್ಪಷ್ಟನೆ ನೀಡಬೇಕೆಂದು ರಾಹುಲ್ ಆಗ್ರಹಿಸಿದ್ದಾರೆ.