ಶ್ರೀನಗರ[ಆ.08]: ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರ ಐತಿಹಾಸಿಕ ಹೆಜ್ಜೆ ಇರಿಸಿತ್ತು. ಈ ಮಧ್ಯೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಾಶ್ಮೀರದ ಬೀದಿಯಲ್ಲಿ ಜನರೊಂದಿಗೆ ನಿಂತು-ಕುಳಿತು ಊಟ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಲಾರಂಭಿಸಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪ್ರತಿಕ್ರಿಯಿಸುತ್ತಾ 'ಹಣ ನೀಡಿ ನೀವು ಯಾರನ್ನಾದರೂ ನಿಮ್ಮೊಂದಿಗೆ ಕರೆದೊಯ್ಯಬಹುದು' ಎಂದು ಟೀಕಿಸಿದ್ದಾರೆ.

ಹೌದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ವಾರದ ಹಿಂದೆ ಜಮ್ಮು ಕಾಶ್ಮೀರಕ್ಕೆ ಎರಡು ದಿನದ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಮರಳುತ್ತಿದ್ದಂತೆಯೇ ಇತರ ರಾಜ್ಯಗಳಿಂದ ಹೆಚ್ಚುವರಿ ಪೊಲೀಸರನ್ನು ಜಮ್ಮು ಕಾಶ್ಮೀರಕ್ಕೆ ಕಳುಹಿಸಲಾಗಿತ್ತು. ಈ ಬೆಳವಣಿಗೆಗಳನ್ನು ಗಮನಿಸಿದವರೆಲ್ಲರೂ ಯುದ್ಧವಾಗುವ ಸಂಭವವಿದೆ ಎಂದೇ ಅಂದಾಜಿಸಿದ್ದರು. ಆದರೆ ಆಗಸ್ಟ್ 5 ರಂದು ರಾಜ್ಯಸಭೆಯ್ಲಲಿ ಪ್ರಸ್ತಾವನೆಯೊಂದನ್ನು ಮಂಡಿಸಿದ ಅಮಿತ್ ಶಾ ಆರ್ಟಿಕಲ್ 370 ರದ್ದುಗೊಳಿಸಿ ಈ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದರು. ಹೀಗಿದ್ದರೂ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿದ್ದ ಹಿನ್ನೆಲೆ ಮತ್ತಷ್ಟು ಭದ್ರತಾ ಪಡೆಯನ್ನು ಕಾಶ್ಮೀರಕ್ಕೆ ರವಾನಿಸಲಾಗಿತ್ತು.

ಕಾಶ್ಮೀರದ ಬೀದಿಯಲ್ಲಿ ಅಜಿತ್ ದೋವೆಲ್ ಊಟ, ಏನಿದರ ಹಿನ್ನೋಟ?

ಸದ್ಯ ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಾಡಾಗಿರುವ ಕಾಶ್ಮೀರದಲ್ಲಿ ಶಾಂತಿ ನೆಲೆಸಿದ್ದು, ಜನರು ನಿಧಾನವಾಗಿ ತಮ್ಮ ಮನೆಯಿಂದ ಹೊರ ಬರುತ್ತಿದ್ದಾರೆ. ಹೀಗಿರುವಾಗ ವಾರದ ಹಿಂದೆ ಕಾಶ್ಮೀರದಿಂದ ದೆಹಲಿಗೆ ಬಂದಿದ್ದ ಅಜಿತ್ ದೋವಲ್ ಮತ್ತೆ ಕಣಿಗೆ ನಾಡಿಗೆ ತೆರಳಿ ಅಲ್ಲಿನ ಜನರೊಡನೆ ಮಾತುಕತೆ ನಡೆಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಇದನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ 'ಹಣ ಕೊಟ್ಟು ನಟರನ್ನು ಕರೆದೊಯ್ಯುವುದು ದೊಡ್ಡದಲ್ಲ, ಯರನ್ನು ಬೇಕದರೂ ಕರೆದೊಯ್ಯಬಹುದು' ಎನ್ನುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.