ನಾನು ಸಾಯುವ ಮುನ್ನ ಶಿವರಾಜ್​ಕುಮಾರ್​ನನ್ನು ಒಮ್ಮೆ ತೋರಿಸಿ ಪ್ಲೀಸ್​’. ತನ್ನ ಎರಡು ಕಿಡ್ನಿ ಕಳೆದುಕೊಂಡು ಮೈಸೂರಿನ ಕೆ.ಆರ್​. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ಸಾವಿನ ದಿನಗಳನ್ನು ಎಣಿಸುತ್ತಿರುವ ಯುವಕನೊಬ್ಬನ ಕಡೆಯ ಆಸೆ ಇದು.

ಮೈಸೂರು(ಮಾ.04): ನಾನು ಸಾಯುವ ಮುನ್ನ ಶಿವರಾಜ್​ಕುಮಾರ್​ನನ್ನು ಒಮ್ಮೆ ತೋರಿಸಿ ಪ್ಲೀಸ್​’. ತನ್ನ ಎರಡು ಕಿಡ್ನಿ ಕಳೆದುಕೊಂಡು ಮೈಸೂರಿನ ಕೆ.ಆರ್​. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ಸಾವಿನ ದಿನಗಳನ್ನು ಎಣಿಸುತ್ತಿರುವ ಯುವಕನೊಬ್ಬನ ಕಡೆಯ ಆಸೆ ಇದು.

ದೇವರು ಒಮ್ಮೊಮ್ಮೆ ಹಾಗೇನೆ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ತಾನೆ. ವಯಸಿಗೆ ಬಂದ ಮಗನ ಎರಡೂ ಕಿಡ್ನಿಗಳು ವಿಫಲಗೊಂಡಿದ್ದು, ತಾಯಿಯೇ ತನ್ನ ಮಗನಿಗೆ ಕಿಡ್ನಿ ಕೊಡಲು ಮುಂದೆ ಬಂದರೂ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣ ಕಿತ್ತು ತಿನ್ನುವ ಬಡತನ. ಇಂತಾ ದಾರುಣ ಸ್ಥಿತಿ ಅನುಭವಿಸುತ್ತಿರುವುದು ಮೈಸೂರು ಜಿಲ್ಲೆ ಹೆಚ್​.ಡಿ. ತಾಲೂಕು ಆಲನಹಳ್ಳಿ ಗ್ರಾಮದ ಮಂಜುಳ ಎಂಬ ಬಡ ಮಹಿಳೆ. 19 ವರ್ಷದ ಜಯಕುಮಾರ್​ ಎಂಬುವವನೇ ತನ್ನ ಎರಡೂ ಕಿಡ್ನಿ ಕಳೆದುಕೊಂಡು ಸಾವಿನ ದಿನಗಳನ್ನು ಎಣಿಸುತ್ತಿರುವ ನತದೃಷ್ಟ ಮಗ.

ತಾನು ಇನ್ನು ಒಂದೇ ವಾರ ಬದುಕುವುದು ಎಂದು ತಿಳಿದಿರುವ ಜಯಕುಮಾರ್​'ಗೆ ತಾನು ಸಾಯುವುದರೊಳಗಾಗಿ ಹೇಗಾದರೂ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ನೋಡಬೇಕು ಎಂಬ ಆಸೆ. ಮೈಸೂರು-ಚಾಮರಾಜನಗರ ಕ್ಷೇತ್ರದ ಸಂಸದ ಧೃವನಾರಾಯಣ್​ ಅವರನ್ನೂ ಕೂಡ ನಾನು ನೋಡಬೇಕು.

ಕಳೆದ 5 ವರ್ಷಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಈಗ ಕಿಡ್ನಿ ವೈಫಲ್ಯಕ್ಕೆ ಬಂದು ನಿಂತಿದೆ. ಗಂಡನಿಂದ ದೂರಾಗಿರುವ ಮಂಜುಳ ಕೂಲಿ ಮಾಡಿ ಇಲ್ಲಿವರೆಗೆ ಲಕ್ಷಾಂತರ ಹಣ ಖರ್ಚು ಮಾಡಿ ಮಗನನ್ನು ಬದುಕಿಸಲು ಹೋರಾಡಿದ್ದಾಳೆ.

ನಿಮಗೆ ಹಣ ನೀಡಲು ಸಾಧ್ಯವಾದರೆ ನನ್ನನ್ನ ಉಳಿಸಿಕೊಳ್ಳಿ. ಇಲ್ಲವಾದರೆ ಕಡೇ ಪಕ್ಷ ನಾನು ಸಾಯುವುದರೊಳಗಾಗಿ ಈ ಇಬ್ಬರನ್ನು ನನಗೆ ತೋರಿಸಿ ಎಂದು ಸಾವಿನಂಚಿನಲ್ಲಿರುವ ಯುವಕ ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ. ನಿಮ್ಮಲ್ಲಿ ಯಾರಾದರೂ ಇವರಿಗೆ ಸಹಾಯ ಮಾಡಲು ಮನಸ್ಸಿದ್ದವರು, ತಾಯಿ ಮಂಜುಳಾ ಅವರ ಕರ್ನಾಟಕ ಬ್ಯಾಂಕ್​ ಬೋಗಾದಿ ಶಾಖೆಯ ಅಕೌಂಟ್​ ನಂಬರ್​​-5192500101738701ಗೆ ಹಣದ ಸಹಾಯ ಮಾಡಬಹುದಾಗಿದೆ.