ತುಮಕೂರಿನಲ್ಲಿ ನಿನ್ನೆ ಆರಂಭವಾದ ಜನಸಂಪರ್ಕ ಅಭಿಯಾನದ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಈಶ್ವರಪ್ಪ ಪರಸ್ಪರ ಕೈಕೈ ಎತ್ತಿ ಹಿಡಿದು ನಿಂತು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದು ಸಾಧ್ಯವಾಗಿದ್ದು ಹೇಗೆ? ನಿಜಕ್ಕೂ ಬಿಜೆಪಿಯ ಒಳಮನೆಯಲ್ಲಿ ಏನು ನಡೆಯುತ್ತಿದೆ? ಇಲ್ಲಿದೆ ವಿಸ್ಕೃತ ವರದಿ
ತುಮಕೂರು(ಮೇ.19): ತುಮಕೂರಿನಲ್ಲಿ ನಿನ್ನೆ ಆರಂಭವಾದ ಜನಸಂಪರ್ಕ ಅಭಿಯಾನದ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಈಶ್ವರಪ್ಪ ಪರಸ್ಪರ ಕೈಕೈ ಎತ್ತಿ ಹಿಡಿದು ನಿಂತು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದು ಸಾಧ್ಯವಾಗಿದ್ದು ಹೇಗೆ? ನಿಜಕ್ಕೂ ಬಿಜೆಪಿಯ ಒಳಮನೆಯಲ್ಲಿ ಏನು ನಡೆಯುತ್ತಿದೆ? ಇಲ್ಲಿದೆ ವಿಸ್ಕೃತ ವರದಿ
ಜನಸಂಪರ್ಕ ಅಭಿಯಾನದ ಸಾರ್ವಜನಿಕ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಈಶ್ವರಪ್ಪ ಇತ್ತೀಚಿನ ತಿಂಗಳುಗಳಲ್ಲೇ ಜನರು ಕಾಣದೇ ಹೋಗಿದ್ದ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದರು. ಇಷ್ಟೇ ಅಲ್ಲ, ಯಡಿಯೂರಪ್ಪ ಹಾಗೂ ಈಶ್ವರಪ್ಪ ಸಮಾವೇಶದ ವೇದಿಕೆಯ ಮೇಲೆ ಅಕ್ಕಪಕ್ಕವೇ ಕುಳಿತು ಪರಸ್ಪರ ನಗೆಚಟಾಕಿ ಹಾರಿಸುತ್ತಾ ನಗುತ್ತಾ ನಗಿಸುತ್ತಾ ಎಲ್ಲರೂ ಕಣ್ಣರಳಿಸಿ ನೋಡುವಂತೆ ಮಾಡಿದರು.
ಇದು ಸಾಧ್ಯವಾಗಿದ್ದು ಹೇಗೆ ಎನ್ನುವುದು ಎಲ್ಲರ ಚರ್ಚೆಗೆ ಗ್ರಾಸವಾಗಿತ್ತು. ಇದೆಲ್ಲಕ್ಕೂ ಕಾರಣವಾಗಿರುವುದು ಮೈಸೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿಗೂ ಮೊದಲು ಹೈಕಮಾಂಡ್ ನಿಂದ ಬಂದ ಸೂಚನೆ ಹಾಗೂ ಅದನ್ನು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳಿಧರರಾವ್ ಅನುಷ್ಟಾನ ಮಾಡಿದ ರೀತಿ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮಲಾಲ್ ನೀವು ಒಗ್ಗಟ್ಟಾಗಿ ಬಂದರಷ್ಟೇ ನಿಮ್ಮ ಮಾತುಗಳಿಗೆ ಕಿವಿಯಾಗುತ್ತೇವೆ. ಇಲ್ಲದಿದ್ದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ತಮ್ಮ ತೀರ್ಮಾನ ಹೇಳುತ್ತಾರೆ ಎಂಬ ಸಂದೇಶ ರವಾನಿಸಿದ್ರು. ಇದಾದ ಬಳಿಕ ರಾಜ್ಯ ಕಾರ್ಯಕಾರಿಣಿಗೆ ಈಶ್ವರಪ್ಪ ಬಂದರೂ ಕೂಡ ಪರಸ್ಪರ ಮುಖಕೊಟ್ಟು ಮಾತಾಡದಂತ ಸ್ಥಿತಿ ಇದ್ದದ್ದನ್ನು ಗಂಭೀರವಾಗಿ ಪರಿಗಣಿಸಿದ ಮುರುಳಿಧರ ರಾವ್ ಅವತ್ತೇ ರಾತ್ರಿ ಇಬ್ಬರು ಪ್ರಮುಖ ನಾಯಕರಿಗೂ ಕೂಡ ಅವರ ವರ್ತನೆಯಿಂದ ಪಕ್ಷದ ವರ್ಚಸ್ಸಿಗೆ ಆಗುವ ಧಕ್ಕೆ ಬಗ್ಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಇದು ಪುನರಾವರ್ತನೆ ಆಗಕೂಡದು ಅಂತಲೂ ಹೇಳಿದ್ರು. ಮರುದಿನವೇ ಇಬ್ಬರೂ ನಾಯಕರ ವರ್ತನೆ ಬದಲಾಗಿತ್ತು. ಅದರ ಮುಂದುವರಿದ ಭಾಗವೇ ತುಮಕೂರಿನ ಸಮಾವೇಶದಲ್ಲಿ ಕಂಡು ಬಂದ ದೃಶ್ಯ
ಒಟ್ಟಾರೆ ಹೈಕಮಾಂಡ್'ನ ಮಧ್ಯಪ್ರವೇಶ ಹಾಗು ಖಡಕ್ ಸೂಚನೆಯ ನಂತರ ಅಪಾಯವನ್ನು ಮೈಮೇಲೆ ಎಳೆದುಕೊಳ್ಳೋದು ಬೇಡ ಅಂತ ಇಬ್ಬರೂ ಪ್ರಮುಖ ನಾಯಕರೂ ತಮ್ಮೊಳಗೆ ನಿರ್ಧಾರ ಮಾಡಿಕೊಂಡಿದ್ದಾರೆ. ಹಾಗಂತ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆಯಾ ಅಂದರೆ, ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದೇ ಉತ್ತರ.
ವರದಿ: ವೀರೇಂದ್ರ ಉಪ್ಪುಂದ, ಸುವರ್ಣನ್ಯೂಸ್.
