ಅಪಘಾತದಲ್ಲಿ ಎರಡೂ ತೋಳುಗಳನ್ನು ಕಳೆದುಕೊಂಡಿದ್ದ ಮಣಿಪಾಲದ 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೊಬ್ಬನ ಎರಡು ತೋಳುಗಳನ್ನು ಕಸಿ ಮಾಡಿರುವ ಅಪರೂಪದ ಘಟನೆ ನಡೆದಿದೆ. ಎರಡೂ ತೋಳುಗಳ ಕಸಿ ಏಷ್ಯಾದಲ್ಲಿ ನಡೆದಿರುವುದು ಇದೇ ಮೊದಲು.
ಕೊಚ್ಚಿ(ಸೆ.29): ಅಪಘಾತದಲ್ಲಿ ಎರಡೂ ತೋಳುಗಳನ್ನು ಕಳೆದುಕೊಂಡಿದ್ದ ಮಣಿಪಾಲದ 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೊಬ್ಬನ ಎರಡು ತೋಳುಗಳನ್ನು ಕಸಿ ಮಾಡಿರುವ ಅಪರೂಪದ ಘಟನೆ ನಡೆದಿದೆ. ಎರಡೂ ತೋಳುಗಳ ಕಸಿ ಏಷ್ಯಾದಲ್ಲಿ ನಡೆದಿರುವುದು ಇದೇ ಮೊದಲು.
ಅದಕ್ಕಿಂತ ಮುಖ್ಯವಾಗಿ ಯುವಕನೊಬ್ಬನ ತೋಳುಗಳನ್ನು ಯುವತಿಗೆ ಅಳವಡಿಸಿರುವುದು ವಿಶ್ವದಲ್ಲೇ ಪ್ರಥಮ ಬಾರಿ! ಈ ಮಹಾನ್ ಸಾಧನೆ ಮೆರೆದಿರುವವರು ಕೊಚ್ಚಿಯ ಅಮೃತಾ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ವೈದ್ಯರು. 20 ಸರ್ಜನ್‌ಗಳು, 16 ಅರಿವಳಿಕೆ ತಜ್ಞರು 13 ತಾಸುಗಳ ಕಾಲ ಈ ಕಸಿ ನಡೆಸಿದ್ದಾರೆ.
ಆಗಿದ್ದೇನು?:
ಪುಣೆಯ ಟಾಟಾ ಮೋಟರ್ಸ್ ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿರುವ ಕೀರಗೌಡ ಸಿದ್ದನಗೌಡರ್ ಹಾಗೂ ಸುಮಾ ನುಗ್ಗಿಹಳ್ಳಿ ದಂಪತಿಗೆ ಶ್ರೇಯಾ ಸಿದ್ದನಗೌಡರ್ ಎಂಬ 19 ವರ್ಷದ ಪುತ್ರಿ ಇದ್ದಾಳೆ. ಆಕೆ ಮಣಿಪಾಲದಲ್ಲಿನ ಮಣಿಪಾಲ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಪುಣೆಯಿಂದ ಒಮ್ಮೆ ಮಣಿಪಾಲಕ್ಕೆ ಬಸ್'ನಲ್ಲಿ ಬರುತ್ತಿದ್ದಾಗ ಬಸ್ ಅಪಘಾತಕ್ಕೆ ಒಳಗಾಗಿತ್ತು. ಅದರಡಿ ಸಿಲುಕಿದ್ದ ಶ್ರೇಯಾ, ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದಳು. ಈ ನಡುವೆ, ಎರ್ನಾಕುಲಂನ ರಾಜಗಿರಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ, 20 ವರ್ಷದ ಸಚಿನ್ ಎಂಬಾತ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನ ಮೆದುಳು ನಿಷ್ಕ್ರಿಯವಾಗಿತ್ತು. ಸಚಿನ್'ನ ತೋಳುಗಳನ್ನು ದಾನ ಮಾಡಲು ಪೋಷಕರು ಒಪ್ಪಿದರು. ಆತನ ತೋಳುಗಳನ್ನು ಶ್ರೇಯಾಗೆ ಅಳವಡಿಸಲಾಗಿದೆ.
ವಿಶ್ವದಲ್ಲಿ ಇಂತಹ 9 ಕಸಿಗಳು ಆಗಿವೆ. ಆದರೆ ಏಷ್ಯಾದಲ್ಲಿ ಇದೇ ಮೊದಲು. ಅದೂ ಯುವಕನ ತೋಳನ್ನು ಯುವತಿಗೆ ಅಳವಡಿಸಿದ್ದು ವಿಶ್ವದಲ್ಲೇ ಮೊದಲು ಎಂದು ವೈದ್ಯರು ತಿಳಿಸಿದ್ದಾರೆ. ಕಸಿ ಮಾಡಿಸಿಕೊಂಡಿರುವ ಶ್ರೇಯಾ ಈಗ ಬೆರಳುಗಳು, ಮುಂಗೈ, ಭುಜ ಅಲುಗಾಡಿಸುತ್ತಿದ್ದಾಳೆ. ಕೆಲ ವಾರಗಳ ಬಳಿಕ ಮೊಣಕೈ ಚಲನೆ ಶುರುವಾಗಲಿದೆ. ಒಂದೂವರೆ ವರ್ಷದಲ್ಲಿ ಶೇ.85ರಷ್ಟು ಚಲನೆಯನ್ನು ಗಳಿಸಿ ಕೊಳ್ಳಲಿದ್ದಾಳೆ ಎಂದು ವೈದ್ಯರು ವಿವರಿಸಿದ್ದಾರೆ.
