ಪ್ರಾಣಿಗಳ ಚಲನವಲನದ ಮೇಲೆ ಕಣ್ಣಿಡಲು ಅವುಗಳಿಗೆ ರೇಡಿಯೋ ಕಾಲರ್ ಹಾಕುವುದು ಗೊತ್ತು. ಬಹುತೇಕ ಇದೇ ಶೈಲಿಯಲ್ಲಿರುವ ವಿಶ್ವದ ಮೊದಲ ಡಿಜಿಟಲ್ ಮಾತ್ರೆಯೊಂದು ಬಳಕೆಗೆ ಸಿದ್ಧವಾಗಿದೆ.
ವಾಷಿಂಗ್ಟನ್ (ನ.21): ಪ್ರಾಣಿಗಳ ಚಲನವಲನದ ಮೇಲೆ ಕಣ್ಣಿಡಲು ಅವುಗಳಿಗೆ ರೇಡಿಯೋ ಕಾಲರ್ ಹಾಕುವುದು ಗೊತ್ತು. ಬಹುತೇಕ ಇದೇ ಶೈಲಿಯಲ್ಲಿರುವ ವಿಶ್ವದ ಮೊದಲ ಡಿಜಿಟಲ್ ಮಾತ್ರೆಯೊಂದು ಬಳಕೆಗೆ ಸಿದ್ಧವಾಗಿದೆ.
ಒಟ್ಸುಕಾ ಫಾರ್ಮಸುಟಿಕಲ್ಸ್ ಕಂಪನಿ ತಯಾರಿಸಿರುವ ಅಬಿಲಿಫಿ ಮೈಸಿಟೆ ಮಾತ್ರೆಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಅನುಮತಿ ನೀಡಿದೆ. ಸ್ಕೀರೆಫ್ರೇನಿಯಾ ರೋಗಗಳಿಂದ ಬಳಲುತ್ತಿರುವವರಿಗೆ ಈ ಮಾತ್ರೆಯನ್ನು ಸಿದ್ಧಪಡಿಸಲಾಗಿದ್ದು, ತಾನು ರೋಗಿಯ ಹೊಟ್ಟೆ ಸೇರಿರುವುದನ್ನು ಮತ್ತು ಯಾವ ಪ್ರಮಾಣದಲ್ಲಿ ಹೊಟ್ಟೆ ಸೇರಿದ್ದೇನೆ ಎಂಬ ಮಾಹಿತಿಯನ್ನು ಸ್ವತಃ ಮಾತ್ರೆಯೇ ರೋಗಿಗೆ, ಅವರ ಸಂಬಂಧಿಕರಿಗೆ ಮತ್ತು ವೈದ್ಯರಿಗೆ ನೀಡುತ್ತದೆ. ಹೀಗಾಗಿ ರೋಗಿ ಮಾತ್ರೆ ಸೇವಿಸಿದ್ದಾರೆಯೇ ಇಲ್ಲವೇ, ಎಷ್ಟು ಮಾತ್ರೆ ಸೇವಿಸಿದ್ದಾರೆ ಎಂಬುದು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.
ಕಾರ್ಯನಿರ್ವಹಣೆಹೇಗೆ?
ಅಬಿಲಿಫಿ ಮಾತ್ರೆಯಲ್ಲಿ ಸಣ್ಣದೊಂದು ಚಿಪ್ ಇರುತ್ತದೆ. ಅದು ಹೊಟ್ಟೆಯೊಳಗೆ ಹೋಗಿ ಆ್ಯಸಿಡ್ ಜೊತೆ ಸೇರಿಕೊಂಡಾಕ್ಷಣ, ರೋಗಿಗೆ ಕೈಗೆ ಕಟ್ಟಿಕೊಂಡಿರುವ ಸಣ್ಣದೊಂದು ಯಂತ್ರಕ್ಕೆ ಸಂದೇಶ ರವಾನಿಸುತ್ತದೆ. ಅದು ಈ ಮಾಹಿತಿಯನ್ನು ಮೊಬೈಲ್‌ಗೆ ರವಾನಿಸುತ್ತದೆ. ಈ ಮೂಲಕ ರೋಗಿ ಔಷಧಿ ಸೇವಿಸಿದ ಸಮಯ, ಪ್ರಮಾಣ ಎಲ್ಲವೂ ಪಕ್ಕಾ ದಾಖಲಾಗುತ್ತದೆ. ಬಳಿಕ ಮಾತ್ರೆಯ ಜೊತೆಗೆ ಇದ್ದ ಚಿಪ್ ಮಲದ ಮೂಲಕ ದೇಹದಿಂದ ಹೊರಹೋಗುತ್ತದೆ. ಇದರಿಂದ ರೋಗಿಗೆ ಯಾವುದೇ ತೊಂದರೆಯೂ ಇರುವುದಿಲ್ಲ. ಸಿಲಿಕಾ, ಮ್ಯಾಗ್ನೇಷಿಯಂ ಮತ್ತು ತಾಮ್ರವನ್ನು ಬಳಸಿ ಈ ಚಿಪ್ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಮಾತ್ರೆಯ ದರ ಎಷ್ಟು ಎಂಬುದನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಇದು ಬಲು ದುಬಾರಿಯಾ ಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಏನಿದುಡಿಜಿಟಲ್ಮಾತ್ರೆ ?ಎಲ್ಲಾ ಮಾತ್ರೆಗಳಂತೆ ಇದೊಂದು ಸಾಮಾನ್ಯ ಮಾತ್ರೆ. ಆದರೆ ಇದರ ನಡುವಿನಲ್ಲಿ ಸಣ್ಣ ಚಿಪ್ ಅಳವಡಿಸಲಾಗಿರುತ್ತದೆ. ಮಾತ್ರೆ ರೋಗಿಯ ಹೊಟ್ಟೆ ಸೇರಿ ಹೊಟ್ಟೆಯ ಆಮ್ಲದ ಜೊತೆ ಸೇರಿದಾಗ ಚಿಪ್ ಪ್ರತಿಕ್ರಿಯಿಸಲು ಆರಂಭಿಸುತ್ತದೆ. ಅಂದರೆ ಮಾತ್ರೆಯ ಪ್ರಮಾಣ, ಸೇವಿಸಿದ ಸಮಯದ ಮಾಹಿತಿಯನ್ನು ರೋಗಿಯ ಕೈಯಲ್ಲಿ ಅಳವಡಿಸಿರುವ ಸಣ್ಣ ಸ್ಟ್ರಿಪ್‌ಗೆ ವರ್ಗಾಯಿಸುತ್ತದೆ. ಈ ಸ್ಟ್ರಿಪ್ ಮಾಹಿತಿಯನ್ನು ರೋಗಿ, ಅವರ ಸಂಬಂಧಿಕರು ಅಥವಾ ವೈದ್ಯರ ಮೊಬೈಲ್‌ಗೆ ರವಾನಿಸುತ್ತದೆ.
ಏನಿದರಉಪಯೋಗ? ಕೆಲವೊಂದು ರೋಗದಿಂದ ಬಳಲುತ್ತಿರುವವರು ಸಮಯಕ್ಕೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳುವುದನ್ನು ಮರೆಯುತ್ತಾರೆ. ಇದರಿಂದ ಅವರನ್ನು ನೋಡಿಕೊಳ್ಳುವುದು ಕುಟುಂಬ ಸದಸ್ಯರಿಗೆ ಕಷ್ಟವಾಗುತ್ತದೆ. ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಕಷ್ಟವಾಗುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ರೋಗಿಯ ಮಾಹಿತಿ ಪೂರ್ಣವಾಗಿ ಮೊಬೈಲ್‌ಗೆ ರವಾನೆಯಾಗುವ ಕಾರಣ, ಮೇಲ್ಕಂಡ ಸಮಸ್ಯೆಯಿಂದ ಪಾರಾಗಬಹುದು.
