ನವದೆಹಲಿ[ಡಿ.19]: ರೈತರ ಸಾಲ ಮನ್ನಾ ರಾಜಕೀಯವಾಗಿ ಭರ್ಜರಿ ಲಾಭ ತಂದುಕೊಡಬಹುದು ಎಂಬುದನ್ನು ಪಂಚರಾಜ್ಯ ಚುನಾವಣಾ ಫಲಿತಾಂಶದಿಂದ ಕಂಡುಕೊಂಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಇದೀಗ, ದೇಶದ ಎಲ್ಲ ರೈತರ ಸಾಲ ಮನ್ನಾ ಆಗುವವರೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಾಂತಿಯಿಂದ ನಿದ್ರಿಸಲು ಬಿಡಲ್ಲ ಎಂದು ಗುಡುಗಿದ್ದಾರೆ.

ಈ ಮೂಲಕ ಮುಂದಿನ ಲೋಕಸಭಾ ಚುನಾವಣೆವರೆಗೂ ರಫೇಲ್‌ ವಿಷಯದ ಜೊತೆ ರೈತರ ಸಾಲ ಮನ್ನಾ ವಿಷಯವನ್ನು ದೊಡ್ಡ ಮಟ್ಟದಲ್ಲಿ ಚುನಾವಣಾ ಪ್ರಚಾರದ ವಿಷಯವನ್ನಾಗಿ ಬಳಸಿಕೊಳ್ಳುವ ಸುಳಿವು ನೀಡಿದ್ದಾರೆ. ಕಾಂಗ್ರೆಸ್‌ನ ಹೊಸ ರಣತಂತ್ರ, ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಶಾಕ್‌ಗೆ ತುತ್ತಾಗಿದ್ದ ಬಿಜೆಪಿಯ ಮೇಲಿನ ಒತ್ತಡವನ್ನು ಇನ್ನಷ್ಟುಹೆಚ್ಚಿಸುವ ನಿರೀಕ್ಷೆ ಇದೆ.

ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಅಧಿಕಾರಕ್ಕೆ ಬಂದ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡಲಿದ್ದೇವೆ ಎಂದು ಹೇಳಿದ್ದೆವು. ಆದರೆ ಅಧಿಕಾರಕ್ಕೆ ಬಂದ 6 ತಾಸಿನಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಇನ್ನು ಪ್ರಧಾನಿ ಮೋದಿ ದೇಶದ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು. ಅಲ್ಲಿಯವರೆಗೆ ಅವರನ್ನು ನಿದ್ರಿಸಲು ಕಾಂಗ್ರೆಸ್‌ ಬಿಡುವುದಿಲ್ಲ.

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಈ ನಡುವೆ ರಾಹುಲ್‌ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ಇಂಥ ಹೇಳಿಕೆಯ ಮೂಲಕ ಸಾರ್ವಜನಿಕ ಚರ್ಚಾ ಮಟ್ಟವನ್ನು ರಾಹುಲ್‌ ಇನ್ನಷ್ಟುಕುಗ್ಗಿಸಿದ್ದಾರೆ ಎಂದು ಟೀಕಿಸಿದ್ದಾರೆ. ಜೊತೆಗೆ, 60 ವರ್ಷಗಳ ತನ್ನ ಕಡು ಭ್ರಷ್ಟಾಚಾರದ ಆಡಳಿತದಿಂದಾಗಿ ದೇಶದ ಜನರು ನಿದ್ದೆಯನ್ನೇ ಮಾಡದಂಥ ವಾತಾವರಣ ಸೃಷ್ಟಿಸಿದ್ದ ಪಕ್ಷವೊಂದರ ಅಧ್ಯಕ್ಷರಿಂದ ಇನ್ನೆಂಥ ಹೇಳಿಕೆ ನಿರೀಕ್ಷಿಸಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ. ಕಳೆದ 60-70 ವರ್ಷಗಳಿಂದ ದೇಶದಲ್ಲಿ ಕಾಂಗ್ರೆಸ್‌ನದ್ದೇ ಆಡಳಿತವಿತ್ತು. ಅವರು ರೈತರಿಗಾಗಿ ಏನು ಮಾಡಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಏನೂ ಮಾಡದ ಕಾಂಗ್ರೆಸ್‌ ಇದೀಗ ರೈತರ ಪರ ಇರುವ ನಾಟಕ ಆಡುತ್ತಿದೆ. ಪ್ರಧಾನಿ ಮೋದಿಗೆ ನಿದ್ದೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡುತ್ತಿದೆ ಎಂದು ಟೀಕಿಸಿದ್ದಾರೆ.

ವಾಗ್ದಾಳಿ:

ಸಂಸತ್‌ ಭವನದಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಗಾಂಧಿ, ‘ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ರೈತರ ಸಾಲ ಮನ್ನಾ ಮಾಡಿ ಕಾಂಗ್ರೆಸ್‌ ಪಕ್ಷ ನುಡಿದಂತೆ ನಡೆದಿದೆ. ಅಧಿಕಾರಕ್ಕೆ ಬಂದ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡಲಿದ್ದೇವೆ ಎಂದು ಹೇಳಿದ್ದೆವು. ಆದರೆ ಅಧಿಕಾರಕ್ಕೆ ಬಂದ 6 ತಾಸಿನಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು. ಅಲ್ಲಿಯವರೆಗೆ ಅವರನ್ನು ನಿದ್ರಿಸಲು ಅಥವಾ ನೆಮ್ಮದಿಯಿಂದ ಕೂಡಲು ಕಾಂಗ್ರೆಸ್‌ ಪಕ್ಷ ಬಿಡುವುದಿಲ್ಲ’ ಎಂದರು.

ಮೋದಿ ಅವರು ಪ್ರಧಾನಿಯಾಗಿ 4.5 ವರ್ಷ ಆಯ್ತು. ಇದುವರೆಗೆ ರೈತರ ಒಂದೇ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ಆದರೆ ಅವರು ತಮ್ಮ 15 ಉದ್ಯಮಪತಿ ಸ್ನೇಹಿತರ 3.5 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ. ಅನಿಲ್‌ ಅಂಬಾನಿ ಅವರ ಕಿಸೆಗೇ 45 ಸಾವಿರ ಕೋಟಿ ರು. ಮನ್ನಾ ಮಾಡಿದ್ದಾರೆ. ಆದರೆ ಹಸಿದ ಹೊಟ್ಟೆಗೆ ಊಟ ಹಾಕುವ ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಆದರೆ ಈ ಸಾಲ ಮನ್ನಾ ಆಗುವವರೆಗೂ ಕಾಂಗ್ರೆಸ್‌ ಮತ್ತು ಇತರೆ ವಿಪಕ್ಷಗಳು ಸುಮ್ಮನೆ ಕೂರುವುದಿಲ್ಲ ಎಂದು ರಾಹುಲ್‌ ಎಚ್ಚರಿಕೆ ನೀಡಿದರು.

ಇಂಥ ಹೇಳಿಕೆಯ ಮೂಲಕ ಸಾರ್ವಜನಿಕ ಚರ್ಚಾ ಮಟ್ಟವನ್ನು ರಾಹುಲ್‌ ಇನ್ನಷ್ಟುಕುಗ್ಗಿಸಿದ್ದಾರೆ ಎಂದು ಟೀಕಿಸಿದ್ದಾರೆ. ಜೊತೆಗೆ, 60 ವರ್ಷಗಳ ತನ್ನ ಕಡು ಭ್ರಷ್ಟಾಚಾರದ ಆಡಳಿತದಿಂದಾಗಿ ದೇಶದ ಜನರು ನಿದ್ದೆಯನ್ನೇ ಮಾಡದಂಥ ವಾತಾವರಣ ಸೃಷ್ಟಿಸಿದ್ದ ಪಕ್ಷವೊಂದರ ಅಧ್ಯಕ್ಷರಿಂದ ಇನ್ನೆಂಥ ಹೇಳಿಕೆ ನಿರೀಕ್ಷಿಸಲು ಸಾಧ್ಯ?

- ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

ಒಂದು ವೇಳೆ ಮೋದಿಗೆ ರೈತರ ಸಾಲ ಮನ್ನಾ ಮಾಡಲು ಆಗಲಿಲ್ಲ ಎಂದುಕೊಳ್ಳಿ. 2019ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ರೈತರ ಎಲ್ಲ ಸಾಲ ಮನ್ನಾ ಮಾಡಲಾಗುವುದು ಎಂದು ಘೋಷಿಸಿದರು.

ಇದೇ ವೇಳೆ ರಫೇಲ್‌ ಯುದ್ಧವಿಮಾನ ಖರೀದಿ ವಿವಾದವನ್ನೂ ಪ್ರಸ್ತಾಪಿಸಿದ ರಾಹುಲ್‌, ‘ಪ್ರೀತಿಯಿಂದ ಸಂಸತ್ತಿನಲ್ಲಿ ಚರ್ಚೆ ನಡೆಸೋಣ ಎನ್ನುವ ಮೋದಿಯವರು ರಫೇಲ್‌ ವಿವಾದದ ಚರ್ಚೆಯಿಂದ ಓಡಿ ಹೋಗುತ್ತಿದ್ದಾರೆ. ರಫೇಲ್‌ ವಿವಾದದ ಚರ್ಚೆ ಆಗಲೇಬೇಕು ಹಾಗೂ ಇದರ ತನಿಖೆಗೆ ಜಂಟಿ ಸದನ ಸಮಿತಿ ರಚನೆ ಆಗಲೇಬೇಕು’ ಎಂದು ಆಗ್ರಹಿಸಿದರು.