ಶಾಸಕ ಪ್ರಿಯಾ ಕೃಷ್ಣಗೆ ಮಗಳನ್ನು ದತ್ತು ನೀಡಲು ಪತ್ರ ಬರೆದು ಮಹಿಳೆ ಆತ್ಮಹತ್ಯೆ

Women Suicide in Bengaluru
Highlights

ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಮಹಿಳೆಯೊಬ್ಬರು ತನ್ನ ಒಂಬತ್ತು ತಿಂಗಳ ಹಸು ಗೂಸುವಿನೊಂದಿಗೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿ ಮತ್ತು ಜ್ಞಾನಭಾರತಿ ಮಧ್ಯೆ ನಡೆದಿದೆ.

ಬೆಂಗಳೂರು : ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಮಹಿಳೆಯೊಬ್ಬರು ತನ್ನ ಒಂಬತ್ತು ತಿಂಗಳ ಹಸು ಗೂಸುವಿನೊಂದಿಗೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿ ಮತ್ತು ಜ್ಞಾನಭಾರತಿ ಮಧ್ಯೆ ಸೋಮವಾರ ತಡರಾತ್ರಿ ನಡೆದಿದೆ.

ಮೃತರನ್ನು ರಾಜರಾಜೇಶ್ವರಿ ನಗರದ ಐಟಿಐ ಲೇಔಟ್ ನಿವಾಸಿ ಮಂಜುಳಾ (38) ಹಾಗೂ ಇವರ 9 ತಿಂಗಳ ಪುತ್ರ ಗಗನ್ ಎಂದು ಗುರುತಿಸಲಾಗಿದೆ.

ಮಂಜುಳಾ ಅವರು ಮೂಲತಃ ಮೈಸೂರು ಜಿಲ್ಲೆ ನರಸೀಪುರ ತಾಲೂಕಿನವರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಎಲೆಕ್ಟ್ರಿಷಿಯನ್ ದಿವಾಕರ್ ಎಂಬುವರನ್ನು ವಿವಾಹವಾಗಿದ್ದು, ದಂಪತಿಗೆ12 ವರ್ಷದ ಗುಣಶ್ರೀ ಎಂಬ ಪುತ್ರಿ ಇದ್ದಾಳೆ. ಕುಟುಂಬ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು, ಐಟಿಎ ಲೇಔಟ್‌ನಲ್ಲಿ ವಾಸವಿತ್ತು. ಸೋಮವಾರ ಸಂಜೆ ಮಂಜುಳಾ ಮನೆಯಲ್ಲಿ ಮಗಳನ್ನು ಬಿಟ್ಟು ಪುತ್ರನೊಂದಿಗೆ ಹೊರಗೆ ಬಂದಿದ್ದಾರೆ.

ಕೆಂಗೇರಿ ಮತ್ತು ಜ್ಞಾನಭಾರತಿ ಮಧ್ಯೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಜ್ಞಾನಭಾರತಿ ಸಮೀಪದ ಆರ್.ವಿ.ಕಾಲೇಜು ಬಳಿ ಭಾಗದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ಹಳಿ ಮೇಲೆ ಬಿದ್ದಿದ್ದ ಶವಗಳನ್ನು ನೋಡಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದರು.

ಸ್ಥಳದಲ್ಲಿ ಸಿಕ್ಕ ಪ್ರಾಥಮಿಕ ಮಾಹಿತಿ ಮೇರೆಗೆ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿ ದಿವಾಕರನ್ನು ಸಂಪರ್ಕಿಸಿದಾಗ ಮೃತರ ಬಗ್ಗೆ ಮಾಹಿತಿ ದೊರೆಯಿತು ಎಂದು ಪೊಲೀಸರು ಹೇಳಿದರು.

ಪುತ್ರಿಯನ್ನು ಶಾಸಕರಿಗೆ ದತ್ತು ನೀಡಿ: ಮೃತ ಮಹಿಳೆ ಬಳಿ ಡೆತ್‌ನೋಟ್ ಪತ್ತೆಯಾಗಿದ್ದು, ‘ನನ್ನ ಸಾವಿಗೆ ನಾನೇ ಕಾರಣ. ನನ್ನ ಪತಿ ಬಳಿ ಇರುವ ಮಗಳನ್ನು ಶಾಸಕ ಪ್ರಿಯಾಕೃಷ್ಣ ಅವರಿಗೆ ದತ್ತು ನೀಡಿ’ ಎಂದು ಬರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಘಟನೆ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಮೃತ ಮಂಜುಳಾ ಅವರ ಪತಿ ದಿವಾಕರ್, ಪತ್ನಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಕೆಲ ವರ್ಷಗಳಿಂದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ನಾನು ಯಶವಂತಪುರದಲ್ಲಿ ಅಪಾರ್ಟ್‌ಮೆಂಟ್ ವೊಂದರ ಕೆಲಸಕ್ಕೆ ತೆರಳಿದ್ದೆ. ಪತ್ನಿ ಸಂಜೆ ಪುತ್ರ ಗಗನ್ ಜತೆ ಮನೆಯಿಂದ ಹೊರಗೆ ಹೋಗಿದ್ದರು. ನಾನು ರಾತ್ರಿ 7.30ರ ಸುಮಾರಿಗೆ ಮನೆಗೆ ಬಂದಾಗ ಮಗಳು ಗುಣಶ್ರೀ ಮಾತ್ರ ಇದ್ದಳು. ತಾಯಿ ಬಗ್ಗೆ ಮಗಳನ್ನು ಪ್ರಶ್ನಿಸಿದಾಗ ಗೊತ್ತಿಲ್ಲ ಎಂದಿದ್ದಳು. ಬಳಿಕ ಸಂಬಂಧಿಕರ ಸಹಾಯದಿಂದ ರಾತ್ರಿ ಇಡೀ ಎಲ್ಲೆಡೆ ಹುಡುಕಾಟ ನಡೆಸಿದ್ದೆ ಆದರೆ, ಪತ್ತೆಯಾಗಿರಲಿಲ್ಲ.

ಮಂಗಳವಾರ ಪೊಲೀಸರು ನಮ್ಮನ್ನು ಸಂಪರ್ಕಿಸಿದಾಗಲೇ ಘಟನೆ ಬೆಳಕಿಗೆ ಬಂತು ಎಂದು ಪತಿ ದಿವಾಕರ್ ಕಣ್ಣೀರು ಹಾಕಿದರು.

loader