ಹಿರಿಯ ನಟ ಅರ್ಜುನ್ ಸರ್ಜಾಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ನಟ ಅರ್ಜುನ್ ಸರ್ಜಾ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಮಹಿಳಾ ಆಯೋಗ ದೂರು ದಾಖಲಿಸಿಕೊಂಡಿದೆ.
ಬೆಂಗಳೂರು: ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿರುವ ನಟಿ ಶ್ರುತಿ ಹರಿಹರನ್ ಅವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಪ್ರಕರಣ ಸಂಬಂಧ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿ ಆಧರಿಸಿ ಶನಿವಾರ ಸ್ವಯಂಪ್ರೇರಿತ (ಸುಮೊಟೊ) ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಅವರಿಗೆ ನೋಟಿಸ್ ನೀಡಿದ್ದಾರೆ.
ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು, ‘ಶ್ರುತಿ ಅವರ ಮೇಲೆ ಎಸಗಿದ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಅರ್ಜುನ್ ಸರ್ಜಾ ವಿರುದ್ಧ ದೂರು ದಾಖಲಿಸಲಾಗಿದೆ. ನಡೆದ ಘಟನಾವಳಿ ಕುರಿತಂತೆ ಮಾಹಿತಿ ನೀಡಲು ನಟಿ ಶ್ರುತಿ ಹರಿಹರನ್ ಅವರನ್ನು ಮೌಖಿಕವಾಗಿ ಆಯೋಗದ ಕಚೇರಿಗೆ ಕರೆದ್ದಿದೇವೆ. ಅವರು ಬಂದ ಬಳಿಕ ಸಮಗ್ರ ಹೇಳಿಕೆ ಪಡೆಯಲಾಗುವುದು’ ಎಂದರು.
ಶ್ರುತಿ ಹರಿಹರನ್ ಮೂರು ದಿನಗಳೊಳಗಾಗಿ ಆಯೋಗಕ್ಕೆ ಬಂದು ವಿವರಣೆ ನೀಡುವುದಾಗಿ ಹೇಳಿದ್ದಾರೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಹಾಗಾಗಿ ಅರ್ಜುನ್ ಸರ್ಜಾಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ. ಶ್ರುತಿ ಹರಿಹರನ್ ಆಯೋಗಕ್ಕೆ ಬಂದು ಸಮಗ್ರ ಮಾಹಿತಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
