ಚಿತ್ರದುರ್ಗ: ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದ ಗರ್ಭಿಣಿಗೆ ಸಕಾಲದಲ್ಲಿ ಚಿಕಿತ್ಸೆ ನೀಡದ ಪರಿಣಾಮ ಕುಟುಂಬ ಸದಸ್ಯರೇ ನಡು ಬೀದಿಯಲ್ಲಿ ಹೆರಿಗೆ ಮಾಡಿಸಿದ ಮನಕಲಕುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಿತ್ರಹಳ್ಳಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. 

ಸದ್ಯ ತಾಯಿ, ಮಗು ಆರೋಗ್ಯವಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರಹಳ್ಳಿ ಗ್ರಾಮದ ಗಂಗಮಾಳಮ್ಮ  ಎಂಬುವರಿಗೆ ಸೋಮವಾರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡಿದ್ದು ತಕ್ಷಣವೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಆಗ ಸಮಯ ಮಧ್ಯಾಹ್ನ 12 ಆಗಿದ್ದು, ವೈದ್ಯರು ಹೊರ ಹೋಗಿದ್ದ ಕಾರಣ ತಪಾಸಣೆ ಮಾಡಲು ಶುಶ್ರೂಷಕಿ ನಿರಾಕರಿಸಿದ್ದಾಳೆ. ನಾನು ಊಟ ಮಾಡಲು ಹೋಗುತ್ತಿದ್ದು ಬಂದ ನಂತರ ನೋಡುವುದಾಗಿ ಹೇಳಿದ್ದಾಳೆ. 

ಅಲ್ಲದೇ ಇಲ್ಲಿ ಯಾರೂ ಇಲ್ಲ ಹೊಳಲ್ಕೆರೆಗೆ ಕರೆದೊಯ್ಯಿರಿ ಎಂದಿದ್ದಾಳೆ. ಈ ವೇಳೆ ಗರ್ಭಿಣಿಯನ್ನು ಕರೆದುಕೊಂಡು ಪೋಷಕರು ಮನೆಯತ್ತ ಹೊರಟಿದ್ದಾರೆ. ಆಸ್ಪತ್ರೆಯಿಂದ ತುಸು ದೂರ ಹೋಗುತ್ತಿದ್ದಂತೆ ಗಂಗಮಾಳಮ್ಮಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಕೆಯ ಜತೆಗಿದ್ದ ಕುಟುಂಬ ಸದಸ್ಯರೆಲ್ಲರೂ ಸೇರಿ ಸೀರೆಯೊಂದನ್ನು ಹಿಡಿದು ಸುತ್ತುವರಿದು, ಅಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. 

ಹೆರಿಗೆಯಾದ ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಧಾವಿಸಿ ಬಂದ ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ತರಿಸಿ, ಸಮೀಪದ ಹೊರಕೆರೆ ದೇವಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ನಂತರ ತಾಯಿ ಹಾಗೂ ಮಗುವನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.