ಚಿತ್ರದುರ್ಗ(ಸೆ.12): ನಿಧಿಯ ಅಸೆಗಾಗಿ ಬಾಲಕನನ್ನು ಕಲ್ಲಿನ ಗುಂಡಿಯಲ್ಲಿ ಹೂತು ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಕಂಚೀಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕಂಚೀಪುರ ಗ್ರಾಮದ ತೋಟವೊಂದರ ಸಮೀಪದಲ್ಲಿರುವ ಕಲ್ಲು ಗುಂಡಿಯಲ್ಲಿ ಮುಚ್ಚಿ ಹಾಕಿದ್ದ ಬಾಲಕನ ಕೈ ಮಾತ್ರ ಕಾಣುತ್ತಿತ್ತು. ಅಲ್ಲಿಯೆ ಕುರಿ ಮೆಯಿಸುತ್ತಿದ್ದ ಕುರಿಗಾಹಿಗಳ ಇದನ್ನು ನೋಡಿ, ಗ್ರಾಮದವರನ್ನು ಕರೆಸಿ ಬಾಲಕನನ್ನು ಕಲ್ಲು ಗುಂಡಿಯಿಂದ ಹೊರಗೆ ತೆಗೆದು ಹೊಸದುರ್ಗ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಮೈಯಲ್ಲಾ ಗಾಯಗಳಾಗಿ ತೀವ್ರ ಅಸ್ವಸ್ಥನಾಗಿದ್ದ ಇವನನ್ನು ಬಳಿಕ ಚಿತ್ರದುರ್ಗ ಆಸ್ಪತ್ರೆಗೆ ರವಾನಿಸಲಾಗಿದೆ

ಬಾಲಕನಿಗೆ ಮಾತು ಬರುವುದಿಲ್ಲ. ಅಷ್ಟೇ ಅಲ್ಲದೆ ಅಂಗವಿಕಲನಾಗಿರುವುದರಿಂದ ಆತನ ಹೆಸರು, ಯಾವ ಊರು ಎಂದು ತಿಳಿದು ಬಂದಿಲ್ಲ. ಚಿತ್ರದುರ್ಗ ಮತ್ತು ಹೊಸದುರ್ಗದ ವೈದ್ಯರು ಇವನ ಸ್ಥಿತಿ ಗಂಭೀರವಾಗಿದ್ದು, ಹೃದಯ ಬಡಿತ ಕಡಿಮೆ ಇದೆ ಅಂತಾ ಹೇಳಿದ್ದಾರೆ. ನಿಧಿಗಾಗಿ ದುಷ್ಕರ್ಮಿಗಳು ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.