ಪಣಜಿ[ಮಾ.27]: ಗೋವಾ ಸಿಎಂ ಮನೋಹರ್ ಪರ್ರಿಕರ್ ವಿಧಿವಶರಾದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಹೈಡ್ರಾಮಾವೇ ನಡೆಯುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಒಂದೆಡೆ ಬಿಜೆಪಿ ಯತ್ನಿಸುತ್ತಿದ್ದರೆ ಅತ್ತ ಕಾಂಗ್ರೆಸ್ ಅಧಿಕಾರ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದೆ. ಹೀಗಿರುವಾಗಲೇ ಮಂಗಳವಾರ ತಡರಾತ್ರಿ ರಾಜಕೀಯ ವಲಯದಲ್ಲಿ ಮಹತ್ತರ ಬೆಳವಣಿಗೆಯೊಂದು ಸಂಭವಿಸಿದೆ.  

ಪರ್ರಿಕರ್ ನಿಧನದ ಬಳಿಕ ವಿಶ್ವಾಸಮತದ ಅಗ್ನಿ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದ್ದ ಪ್ರಮೋದ್ ಸಾವಂತ್ ಗೋವಾದ ನೂತನ ಮುಖ್ಯಮಂತ್ರಿಯಾಗಿದ್ದರು. ಇದರಿಂದಾಗಿ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿತ್ತು. ಮಿತ್ರ ಪಕ್ಷಗಳ 6 ಶಾಸಕರು ಹಾಗೂ 3 ಪಕ್ಷೇತರ ಶಾಸಕರ ಬೆಂಬಲದಿಂದ ಬಿಜೆಪಿ ಮತ್ತೆ ಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಬೆಳವಣಿಗೆಗಳ ಬೆನ್ನಲ್ಲೇ ಮಿತ್ರ ಪಕ್ಷ ಎಂಜಿಪಿ ಬೆಂಬಲ ವಾಪಾಸ್ ಪಡೆಯುವುದಾಗಿ ಬೆದರಿಕೆ ಹಾಕಿದ್ದು, ಇದು ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. 

ಆದರೆ ಮಂಗಳವಾರ ತಡರಾತ್ರಿ ಮಹತ್ತರ ಬೆಳವಣಿಗಗಳಾಗಿದ್ದು, ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿವೆ.  ಗೋವಾ ಸರ್ಕಾರಕ್ಕೆ ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿಯೊಂದಿಗೆ ಕೈಜೋಡಿಸಿದ್ದು, ಸದ್ಯ ಗೋವಾದಲ್ಲಿ ಬಿಜೆಪಿಯ ಬಲ 14ರಿಂದ 16ಕ್ಕೆ ಏರಿಕೆಯಾಗಿದೆ.

ಎಂಜಿಪಿ ಪಕ್ಷದ ಇಬ್ಬರು ಶಾಸಕರು ಮನೋಹರ್​ ಅಜ್ಗಾಂವಕರ್​ ಹಾಗೂ ದೀಪಕ್​ ಪಾವಸ್ಕರ್​ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರು ಶಾಸಕರು ತಾವು ಎಂಜಿಪಿಯಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಮಂಗಳವಾರ ತಡರಾತ್ರಿ 1.45ಕ್ಕೆ ಗೋವಾ ಸ್ಪೀಕರ್​ ಮೈಕಲ್​ ಲೋಬೋರಿಗೆ ಪತ್ರ  ಬರೆದಿದ್ದಾರೆ.  ಆದರೆ ಎಂಜಿಪಿ ಪಕ್ಷದ ಮತ್ತೊಬ್ಬ ಶಾಸಕ ಸುದಿನ್​ ಧವಾಲಿಕರ್​ ಬಿಜೆಪಿಯಿಂದ ದೂರವುಳಿದಿದ್ದಾರೆ.

ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮನೋಹರ್ ಪ್ರವಾಸೋದ್ಯಮ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಸುದಿನ್ ಗೋವಾದ ಡಿಸಿಎಂ ಆಗಿದ್ದಾರೆ. ಎಂಜಿಪಿಯಲ್ಲಿ ಒಟ್ಟು ಮೂವರು ಶಾಸಕರಿದ್ದಾರೆ. ಇದೀಗ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಗೊಂಡಿರುವುದರಿಂದ ಪಕ್ಷಾಂತರ ಕಾಯ್ದೆಗೆ ವಿರುದ್ಧವಾಗಿಲ್ಲ ಮತ್ತು ಶಾಸಕ ಸ್ಥಾನಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ಪಕ್ಷಾಂತರಗೊಳ್ಳಲು ಎಂಜಿಪಿ ಶಾಸಕರು ಮನವಿ ಮಾಡಿರುವ ವಿಚಾರವನ್ನು ಸ್ಪೀಕರ್ ಮೈಕಲ್ ಲೋಬೋ​ ಖಾತ್ರಿಪಡಿಸಿದ್ದಾರೆ.