ಬೆಂಗಳೂರು[ಜು. 26]  ಹೊಸ ಸರ್ಕಾರ ತನ್ನ ಬಹುಮತ ಮಾಡಿದ ತಕ್ಷಣವೇ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಅವರು ಘೋಷಿಸಿದ್ದಾರೆ.

‘ಅವಧಿ’ ಆನ್ಲೈನ್ ಸಾಹಿತ್ಯ ಪತ್ರಿಕೆ ನಡೆಸಿದ ಸಂವಾದದಲ್ಲಿ ಅರವಿಂದ ಮಾಲಗತ್ತಿ ಉತ್ತರಿಸುತ್ತ, ಹೊಸ ಸರ್ಕಾರ ಬಂದ ತಕ್ಷಣ ರಾಜೀನಾಮೆ ನೀಡಬೇಕು ಎನ್ನುವ ನಿರ್ಬಂಧವೇನೂ ಇಲ್ಲ. ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಸಮಿತಿ ನೀಡಿದ ಶಿಫಾರಸು ಕೂಡ ಯಾವುದೇ ಅಧ್ಯಕ್ಷರು 3 ವರ್ಷದ ತಮ್ಮ ಅವಧಿ ಸಂಪೂರ್ಣಗೊಳಿಸುವ ಬಗ್ಗೆ ಒತ್ತು ನೀಡಿದೆ. ಆದರೆ ನಾನು ನೈತಿಕತೆಯ ಪ್ರಶ್ನೆಯನ್ನಿಟ್ಟಿಕೊಂಡು ರಾಜೀನಾಮೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

60 ವರ್ಷ ದಾಟಿದವರಿಗಷ್ಟೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿ ಇತಿಹಾಸ ಒಂಚೂರು:  ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಒಂದು ಭಾಗವಾಗಿದ್ದರೂ ಅದು ಸ್ವಾಯತ್ತ ಸಂಸ್ಥೆಯಾಗಿದೆ. ಇದಕ್ಕೆ ಅಧ್ಯಕ್ಷರು ಹಾಗೂ ಹದಿನೆಂಟು ಜನ ಸದಸ್ಯರನ್ನು ಸರ್ಕಾರವೇ ನೇಮಕ ಮಾಡುತ್ತದೆ. 1961ರಲ್ಲಿ ಮೈಸೂರು ರಾಜ್ಯ ಸಾಹಿತ್ಯ ಅಕಾಡೆಮಿ ಹೆಸರಿನಲ್ಲಿ ಇದು ಅಸ್ತಿತ್ವಕ್ಕೆ ಬಂದಿತು. ಮೈಸೂರು ರಾಜ್ಯದ ಹೆಸರು 1973ರಲ್ಲಿ “ಕರ್ನಾಟಕ” ಎಂದು ನಾಮಕರಣವಾದ ಮೇಲೆ `ಕರ್ನಾಟಕ ಸಾಹಿತ್ಯ ಅಕಾಡೆಮಿ’ ಎಂಬ ಹೆಸರನ್ನು ಪಡೆಯಿತು. ಪ್ರಾರಂಭದಲ್ಲಿ ಅಕಾಡೆಮಿಯ ಕಾರ್ಯವನ್ನು ಸರ್ಕಾರವೇ ನಿರ್ವಹಿಸುತ್ತಿತ್ತು

ಶಿಕ್ಷಣ ಸಚಿವರು ಅಕಾಡೆಮಿಯ ಅಧ್ಯಕ್ಷರಾಗಿಯೂ ಉಪಶಿಕ್ಷಣ ಸಚಿವರು ಉಪಾಧ್ಯಕ್ಷರಾಗಿಯೂ ಇರುತ್ತಿದ್ದರು. ಆನಂತರ ನಾಡಿನ ಹಿರಿಯ ಸಾಹಿತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಪದ್ಧತಿ ಜಾರಿಗೆ ಬಂದಿತು. ಹೆಸರಾಂತ ಸಾಹಿತಿಗಳಾದ ಡಾ. ಹಾ.ಮಾ.ನಾಯಕ,  ಡಾ.ಕೆ.ಎಸ್. ನಿಸಾರ್ ಅಹಮದ್,  ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ಬರಗೂರು ರಾಮಚಂದ್ರಪ್ಪ,  ಪ್ರೊ. ಮಾಲತಿ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.