ಬೆಂಗಳೂರು (ಮಾ. 08):  ಕರ್ನಾಟಕ ಸಾಹಿತ್ಯ ಅಕಾಡೆಮಿ 2018-19ನೇ ಸಾಲಿನಿಂದ ‘ಗೌರವ’ ಪ್ರಶಸ್ತಿಗೆ 60 ವರ್ಷ ಹಾಗೂ ‘ಸಾಹಿತ್ಯಶ್ರೀ’ ಪ್ರಶಸ್ತಿಗೆ 45 ವರ್ಷ ಮೀರಿದ ಸಾಧಕರನ್ನು ಮಾತ್ರ ಪರಿಗಣಿಸಲು ತೀರ್ಮಾನಿಸಿದೆ.

ಅಕಾಡೆಮಿ ಅಧ್ಯಕ್ಷ ಡಾ. ಅರವಿಂದ ಮಾಲಗತ್ತಿ, ಪ್ರಶಸ್ತಿಗೆ ಆಯ್ಕೆ ಮಾಡುವಾಗ ಪ್ರಧಾನವಾಗಿ ಸಾಹಿತಿಯ ಒಟ್ಟು ಸಾಧನೆ ಮತ್ತು ಅವರ ಸಾಹಿತ್ಯದ ಕುರಿತು ಸಾಹಿತ್ಯ ಕ್ಷೇತ್ರದಲ್ಲಿ ನಡೆದ ಚರ್ಚೆಗಳನ್ನು ಪರಿಗಣಿಸಲಾಗುತ್ತದೆ. ಪ್ರಶಸ್ತಿ ನೀಡುವಾಗ ಯಾವುದೇ ರೀತಿಯ ಗೊಂದಲವಾಗಬಾರದು ಎಂಬ ಉದ್ದೇಶದಿಂದ ಅವರ ವಯೋಮಾನವನ್ನು ಸಹ ಪರಿಗಣಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ 53ನೇ ಸಮಾರಂಭ ಇದಾಗಿದ್ದು, ಇದುವರೆಗೂ 328 ಸಾಹಿತಿಗಳಿಗೆ ಗೌರವ ಪ್ರಶಸ್ತಿ ನೀಡಲಾಗಿದೆ. ಗೌರವ ಪ್ರಶಸ್ತಿಗೆ 50 ಸಾವಿರ ರು., ಸಾಹಿತ್ಯಶ್ರೀ, ಮಾಧ್ಯಮ ಪುರಸ್ಕಾರ ಮತ್ತು ಪುಸ್ತಕ ಬಹುಮಾನಕ್ಕೆ ತಲಾ 25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.

2018ರ ಸಾಲಿನ ಗೌರವ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿ, ಮಾಧ್ಯಮ ಸಾಹಿತ್ಯ ಪುರಸ್ಕಾರ ಮತ್ತು 2017ರ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಮಾಚ್‌ರ್‍ 9ರಂದು ಸಂಜೆ 5.30ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್‌ ಪ್ರಶಸ್ತಿ ಪ್ರದಾನ ಮಾಡುವರು. ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಪ್ರಶಸ್ತಿ ಪ್ರದಾನ ಸಮಾರಂಭದ ಭಾಷಣ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಎಂ.ಎ. ಗೋಪಾಲಸ್ವಾಮಿ, ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಬಿ.ಎಚ್‌. ಅನಿಲ್‌ ಕುಮಾರ್‌, ನಿರ್ದೇಶಕಿ ಕೆ.ಎಂ.ಜಾನಕಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಪ್ರಶಸ್ತಿ ಪುರಸ್ಕೃತರು

ಡಾ.ಬಿ.ಎ.ವಿವೇಕ ರೈ, ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ, ದೇಶಾಂಶ ಹುಡಗಿ, ಸಾಯಿಸುತೆ, ಪ್ರೊ.ಎ.ಕೆ. ಹಂಪಣ್ಣ ಅವರಿಗೆ ಗೌರವ ಪ್ರಶಸ್ತಿ ಮತ್ತು ಡಾ.ಡಿ.ಕೆ.ರಾಜೇಂದ್ರ, ಪ್ರೊ.ಕೆ.ಸಿ.ಶಿವಪ್ಪ, ಪ್ರೊ.ಪಾರ್ವತಿ ಜಿ.ಐತಾಳ್‌, ಡಾ.ಪುರುಷೋತ್ತಮ ಬಿಳಿಮಲೆ, ಸತೀಶ್‌ ಕುಲಕರ್ಣಿ, ಜಿ.ಕೃಷ್ಣಪ್ಪ, ಪ್ರೊ.ಜಿ.ಅಬ್ದುಲ್‌ ಬಷೀರ್‌, ಡಾ.ಎಚ್‌.ಎಲ್‌. ಪುಷ್ಪ, ಗಂಗಾರಾಂ ಚಂಡಾಳ, ಡಾ.ರಂಗರಾಜ ವನದುರ್ಗ ಅವರು ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇದೇ ಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಆರಂಭಿಸಿರುವ ಮಾಧ್ಯಮ ಸಾಹಿತ್ಯ ಪುರಸ್ಕಾರದಡಿ ಮುದ್ರಣ ಮಾಧ್ಯಮ ವಿಭಾಗದಲ್ಲಿ ಪ್ರಜಾವಾಣಿ ದಿನಪತ್ರಿಕೆ ಮತ್ತು ಡಿಜಿಟಲ್‌ ಮಾಧ್ಯಮ ಸಾಹಿತ್ಯ ಪುರಸ್ಕಾರಕ್ಕೆ ‘ಅವಧಿ’ ಆಯ್ಕೆಯಾಗಿವೆ. ಉಳಿದಂತೆ 19 ಲೇಖಕರ ಕೃತಿಗಳಿಗೆ ಮತ್ತು ಎಂಟು ಜನ ದತ್ತಿ ಬಹುಮಾನಿತರ ಎಂಟು ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟು 44 ಪುರಸ್ಕಾರಗಳನ್ನು ಈ ಬಾರಿ ಅಕಾಡೆಮಿ ನೀಡುತ್ತಿದೆ ಎಂದು ತಿಳಿಸಿದರು.

ಮುಂದಿನ ವರ್ಷದಿಂದ ಗೌರವ ಪ್ರಶಸ್ತಿಗೆ ತಲಾ 1 ಲಕ್ಷ ಹಾಗೂ ಸಾಹಿತ್ಯಶ್ರೀ, ಮಾಧ್ಯಮ ಪುರಸ್ಕಾರ, ಪುಸ್ತಕ ಬಹುಮಾನಕ್ಕೆ ತಲಾ 50 ಸಾವಿರ ರು. ನಗದು ಬಹುಮಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇತರ ಅಕಾಡೆಮಿಗಳ ಪ್ರಶಸ್ತಿ ಮೊತ್ತ ಹೆಚ್ಚಾಗಿದ್ದು, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೂ ನಗದು ಬಹುಮಾನದ ಮೊತ್ತವನ್ನು ಹೆಚ್ಚಿಗೆ ಮಾಡುವಂತೆ ಮನವಿ ಮಾಡಲಾಗುವುದು.