ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಕಂಡಿದ್ದು ಇದೀಗ ಮುಂದಿನ ಚುನಾವಣೆಯಲ್ಲಿ ಬಡವರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಪ್ಲಾನ್ ಒಂದನ್ನು ಮಾಡುತ್ತಿದೆ.  ‘ಸಾರ್ವತ್ರಿಕ ಕನಿಷ್ಠ ಆದಾಯ’ ಯೋಜನೆ ಘೋಷಣೆ ಮಾಡಲು ಚಿಂತನೆ ನಡೆಸಿದೆ.

ನವದೆಹಲಿ: ಲೋಕಸಭೆ ಚುನಾವಣೆಗೆ ಕೇವಲ ನಾಲ್ಕೈದು ತಿಂಗಳುಗಳು ಬಾಕಿ ಇರುವಾಗ ತನ್ನ ಭದ್ರಕೋಟೆಯಂತಿದ್ದ ಹಿಂದಿ ಸೀಮೆಯ 3 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಜನರನ್ನು ಅದರಲ್ಲೂ ವಿಶೇಷವಾಗಿ ಕಡುಬಡವರನ್ನು ಸೆಳೆಯಲು ಬಂಪರ್‌ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಫೆ.1ರಂದು ಮಂಡನೆಯಾಗಲಿರುವ ಮಧ್ಯಂತರ ಹಣಕಾಸು ಬಜೆಟ್‌ನಲ್ಲಿ ‘ಸಾರ್ವತ್ರಿಕ ಕನಿಷ್ಠ ಆದಾಯ’ ಯೋಜನೆ ಘೋಷಣೆ ಮಾಡಲು ಚಿಂತನೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಪರಾಭವಗೊಂಡಿದ್ದಕ್ಕೆ ರೈತರ ಆಕ್ರೋಶವೂ ಕಾರಣ ಎಂಬುದನ್ನು ಮನಗಂಡಿರುವ ಸರ್ಕಾರ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಮಂಡಿಸುವ ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಾರ್ಯಕ್ರಮಗಳನ್ನು ಪ್ರಕಟಿಸಲು ಗಂಭೀರ ಆಲೋಚನೆಯಲ್ಲಿ ಮುಳುಗಿದೆ ಎಂದು ಆಂಗ್ಲ ಟೀವಿ ವಾಹಿನಿಯೊಂದು ವರದಿ ಮಾಡಿದೆ.

ಫಲಾನುಭವಿಗಳ ನೈಜ ಆದಾಯವನ್ನು ವಿವಿಧ ಮೂಲಗಳಿಂದ ಖಚಿತಪಡಿಸಿಕೊಂಡು ಹಾಗೂ ಸರ್ಕಾರದಿಂದ ದೊರೆಯುವ ಸಬ್ಸಿಡಿಯನ್ನು ಲೆಕ್ಕ ಹಾಕಿ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆಯನ್ನು ಜಾರಿಗೆ ತರುವುದಾಗಿ ರಾಜಸ್ಥಾನ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಭರವಸೆ ನೀಡಿತ್ತು. ಆದರೆ ಅದು ಹೆಚ್ಚು ಜನರ ಗಮನ ಸೆಳೆದಿರಲಿಲ್ಲ.

ಏನಿದು ಯೋಜನೆ?: ಕಡುಬಡವರಿಗೆ ಮಾಸಿಕ ಇಂತಿಷ್ಟುಎಂದು ಸರ್ಕಾರದಿಂದಲೇ ಹಣ ನೀಡುವ ಮೂಲಕ ಅವರನ್ನು ಬಡತನ ರೇಖೆಯಿಂದ ಮೇಲಕ್ಕೆತ್ತುವುದು ಈ ಯೋಜನೆಯ ತಿರುಳು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಲವಾರು ವರ್ಷಗಳಿಂದ ಈ ಯೋಜನೆ ಚರ್ಚೆಯಲ್ಲಿದೆ. ಕೆನಡಾ ಹಾಗೂ ಸ್ವಿಜರ್ಲೆಂಡ್‌ ಸರ್ಕಾರಗಳು ಪ್ರಾಯೋಗಿಕವಾಗಿ ಅನುಷ್ಠಾನ ನಡೆಸಿವೆ. ಭಾರತದಲ್ಲೂ ಈ ಯೋಜನೆ ಜಾರಿಗೆ ತರಬೇಕು ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಸಲಹೆ ಮಾಡಿದ್ದರು.

ಈ ಯೋಜನೆಯಿಂದ ಬಡವರು ಕೆಲಸ ಮಾಡುವುದನ್ನೇ ಬಿಟ್ಟುಬಿಡುವ ಸಂಭವವಿದೆ ಎಂಬ ವಾದವೂ ಇದೆ. ಆದರೆ ಬಡವರಿಗೆ ಸ್ವಲ್ಪ ಸಹಾಯ ಮಾಡಿದಾಕ್ಷಣ ಆ ರೀತಿ ಏನೂ ಆಗದು ಎಂದು ಸುಬ್ರಮಣಿಯನ್‌ ಈ ಹಿಂದೆಯೇ ತಿಳಿಸಿದ್ದರು.