ಹಾಸನ  [ಜು.17]: ಅತೃಪ್ತ ಮುಖಂಡರು ವಾಪಸಾದಲ್ಲಿ ರೇವಣ್ಣಗೆ ಹೇಳಿ ರಾಜೀನಾಮೆ ಕೊಡಿಸುತ್ತೇವೆ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ರಾಮಸ್ವಾಮಿ, ರಾಜೀನಾಮೆ ನೀಡಿ ಹೋದವರೆಲ್ಲಾ ಆಪಾದನೆ ಮಾಡಿ ತೆರಳಿದ್ದಾರೆ. ಈ ಆರೋಪಗಳೆಲ್ಲಾ ನೆಪ ಮಾತ್ರ. ಬಿಜೆಪಿಗೆ ಹೋಗಬೇಕು ಎನ್ನುವುದು ಮುಖ್ಯ ಕಾರಣ ಎಂದು ಆರೋಪಿಸಿದರು.

ಇನ್ನು ರಾಜ್ಯದಲ್ಲಿ  ಕಾಂಗ್ರೆಸ್- ಜೆಡಿಎಸ್ ಮೈತ್ರಿಯಲ್ಲಿ ಲೋಪಗಳು ಇರುವುದು ನಿಜ ಎಂದು ಹೇಳಿದ ರಾಮಸ್ವಾಮಿ,  ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳೋಣ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಆದರೆ ಈಗ ಅಸಮಾಧಾನ ಹೊರಬಿದ್ದು, ರಾಜಕೀಯ ಸ್ಥಿತಿ ಹದಗೆಟ್ಟಿದೆ ಎಂದರು. ರೇವಣ್ಣ ರಾಜಕೀಯದ ಬಗ್ಗೆಯೂ ಪ್ರಸ್ತಾಪಿಸಿದ ಶಾಸಕ, ಅವರು ಹೆಚ್ಚು ಸ್ಪೀಡ್ ರಾಜಕಾರಣಿ. ವೇಗ ಹೆಚ್ಚಾದಾಗ ಹೀಗೆಲ್ಲಾ ಆಗುವುದು ಖಚಿತ ಎಂದರು.

ಹೆಚ್ಚು ನಂಬಿಕಸ್ಥರೆಲ್ಲಾ ಕೈ ಕೊಟ್ಟು ಹೋದರು.  ಶಾಸಕ ಎಂಟಿಬಿ ನಾಗರಾಜ್ ಸಿದ್ರಾಮಣ್ಣ ಎನ್ನುತ್ತಿದ್ದರು. ಆದರೆ ಅವರೂ ಕೈ ಕೊಟ್ಟು ಓಡಿಹೋದರು. ಎಷ್ಟಾದರೂ ಹೊಗಳು ಭಟರು ಅಪಾಯಕಾರಿಯೇ ಎಂದರು. 

ಇನ್ನು ತಮ್ಮ ರಾಜಕಾರಣದ ಬಗ್ಗೆಯೂ ಮಾತನಾಡಿದ ರಾಮಸ್ವಾಮಿ  ನಾನು ಸ್ವಾಸ್ಥ್ಯ ಕಾಪಾಡಿಕೊಂಡು ಬಂದಿದ್ದೇನೆ . ನನಗೆ ನನ್ನ ಕ್ಷೇತ್ರವೇ ರೆಸಾರ್ಟ್ . ಇದನ್ನು ಬಿಟ್ಟು ಎಲ್ಲಿಯೂ ತೆರಳುವ ಮಾತೇ ಇಲ್ಲ, ಆದರೆ ರಾಜ್ಯ ರಾಜಕೀಯ ವಿಷಮ ಸ್ಥಿತಿಯಲ್ಲಿರುವುದಾಗಿ ಮಾತ್ರ ಹೇಳುವೆ ಎಂದರು.