ಉತ್ತನ್ :  ಅಯೋಧ್ಯೆ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮುಂದೂಡಿದ ತರುವಾಯ ರಾಮಮಂದಿರಕ್ಕಾಗಿನ ತನ್ನ ಬೇಡಿಕೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್‌) ಮತ್ತಷ್ಟುತೀವ್ರಗೊಳಿಸಿದೆ. ಅಯೋಧ್ಯೆ ವಿವಾದ ತನ್ನ ಆದ್ಯತೆ ಅಲ್ಲವೆಂಬ ಸುಪ್ರೀಂಕೋರ್ಟ್‌ ಹೇಳಿಕೆ ಹಿಂದುಗಳಿಗೆ ಮಾಡಿದ ಅವಮಾನ, ಈ ಅವಮಾನವನ್ನು ನೀಗಲು ರಾಮಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯೊಂದನ್ನು ಹೊರಡಿಸಬೇಕು ಎಂದು ಆಗ್ರಹಿಸಿದೆ. 

ಅಲ್ಲದೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಗತ್ಯ ಬಿದ್ದಲ್ಲಿ 1990ರ ಮಾದರಿ ಹೋರಾಟವನ್ನು ಮತ್ತೊಮ್ಮೆ ಸಂಘಟಿಸಲು ತಾನು ಸಿದ್ಧ ಎಂದು ಘೋಷಿಸಿದೆ. ಈ ಮೂಲಕ ರಾಮಮಂದಿರ ನಿರ್ಮಾಣ ವಿಷಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಡಿ ಇಡದೇ ಹೋದಲ್ಲಿ, ಸರ್ಕಾರದ ಜೊತೆಗೆ ಸಂಘರ್ಷಕ್ಕೆ ಇಳಿಸುವ ಸ್ಪಷ್ಟಸಂದೇಶವನ್ನು ಅದು ಶುಕ್ರವಾರ ರವಾನಿಸಿದೆ.

2019ರ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಆರ್‌ಎಸ್‌ಎಸ್‌ನಿಂದ ಈ ಎಚ್ಚರಿಕೆ ರವಾನೆಯಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣವೊಂದರ ಬಗ್ಗೆ ಆರ್‌ಎಸ್‌ಎಸ್‌ ನೀಡಿರುವ ಎಚ್ಚರಿಕೆ, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಅಯೋಧ್ಯೆ ವಿಷಯದಲ್ಲಿ ಆರ್‌ಎಸ್‌ಎಸ್‌ ಅನ್ನು ಎದುರು ಹಾಕಿಕೊಳ್ಳದೆಯೇ ಬಿಜೆಪಿ ಯಾವ ಹೆಜ್ಜೆ ಇಡಬಹುದು ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.

ಬಹಿರಂಗ ಎಚ್ಚರಿಕೆ:  ಮಹಾರಾಷ್ಟ್ರದ ಉತ್ತನ್‌ನಲ್ಲಿ ಮೂರು ದಿನಗಳ ಕಾಲ ನಡೆದ ಆರ್‌ಎಸ್‌ಎಸ್‌ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಶಿ, ದಶಕಗಳಿಂದ ಕಾನೂನು ಹೋರಾಟದಲ್ಲಿ ಸಿಲುಕಿರುವ ಅಯೋಧ್ಯೆ ರಾಮಜನ್ಮಭೂಮಿ ವಿವಾದ ತನ್ನ ಆದ್ಯತೆಯ ವಿಷಯವಲ್ಲ ಎಂಬ ಸುಪ್ರೀಂಕೋರ್ಟ್‌ ಅಭಿಪ್ರಾಯ ತೀವ್ರ ಆಕ್ಷೇಪಾರ್ಹ. ಸರ್ವೋಚ್ಚ ನ್ಯಾಯಾಲಯದ ಈ ಮಾತಿನಿಂದ ಅವಮಾನಕ್ಕೆ ಒಳಗಾದ ಭಾವ ಹಿಂದುಗಳನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಮಂದಿರ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಬಳಿ ಇರುವ ಎಲ್ಲಾ ಮಾರ್ಗಗಳು ಮುಚ್ಚಿವೆ ಎಂದಾದಲ್ಲಿ, ಸುಗ್ರೀವಾಜ್ಞೆಯ ಮೂಲಕವೇ ಆಶಯ ಈಡೇರಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಅಗತ್ಯ ಬಿದ್ದರೆ ರಾಮಮಂದಿರ ನಿರ್ಮಾಣಕ್ಕಾಗಿ 1990ರಲ್ಲಿ ನಡೆಸಿದ್ದ ಮಾದರಿಯ ಹೋರಾಟ ಆರಂಭಿಸಲೂ ಹಿಂಜರಿಯುವುದಿಲ್ಲ. ಆದರೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಕೆಲವೊಂದು ನಿರ್ಬಂಧಗಳಿವೆ ಎಂದು ಜೋಶಿ ಹೇಳಿದರು.

ರಾಮಮಂದಿರ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ನಾವು ಒತ್ತಡ ಹೇರುತ್ತಿಲ್ಲ. ಕಾನೂನು ಹಾಗೂ ಸಂವಿಧಾನವನ್ನು ನಾವು ಗೌರವಿಸುತ್ತೇವೆ. ಹೀಗಾಗಿಯೇ ವಿಳಂಬವಾಗಿದೆ. ಸುಪ್ರೀಂಕೋರ್ಟಿನ ಬಗ್ಗೆಯೂ ನಮಗೆ ಗೌರವವಿದೆ. ಹಿಂದುಗಳ ಭಾವನೆಯನ್ನು ಪರಿಗಣಿಸಬೇಕು ಎಂದು ಕೋರುತ್ತೇವೆ ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟ್‌ ತೀರ್ಪಿಗಾಗಿ ಬಹಳ ಹಿಂದಿನಿಂದಲೂ ಕಾಯುತ್ತಿದ್ದೇವೆ. ಅ.29ರಂದು ವಿಚಾರಣೆ ನಿಗದಿಗೊಳಿಸಿದ್ದರಿಂದ ದೀಪಾವಳಿ ಹಬ್ಬಕ್ಕೂ ಮುನ್ನ ಹಿಂದುಗಳಿಗೆ ಶುಭ ಸುದ್ದಿ ಸಿಗಲಿದೆ ಎಂದು ಭಾವಿಸಿದ್ದೆವು. ಆದರೆ ವಿಚಾರಣೆಯನ್ನು ಸುಪ್ರಿಂಕೋರ್ಟ್‌ ಮುಂದೂಡಿತು ಎಂದು ತಿಳಿಸಿದರು.

ಸುಪ್ರೀಂ ನಿರ್ಧಾರ: ಅ.29ರಂದು ಅಯೋಧ್ಯೆ ಮೂಲ ವಿವಾದ ಕುರಿತ ಅರ್ಜಿಯ ಪರಿಶೀಲನೆ ನಡೆಸಿದ್ದ ಸುಪ್ರೀಂಕೋರ್ಟ್‌, ಪ್ರಕರಣದ ವಿಚಾರಣೆಯನ್ನು 2019ರ ಜನವರಿಗೆ ಮುಂದೂಡಿತ್ತು. ಈ ವೇಳೆ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ್ದ ನ್ಯಾಯಪೀಠ, ನಮಗೆ ನಮ್ಮದೇ ಆದ ಆದ್ಯತೆಯ ಬೇರೆ ಪ್ರಕರಣಗಳಿವೆ. ಅಯೋಧ್ಯೆ ಪ್ರಕರಣದ ಅರ್ಜಿ ಜನವರಿ, ಫೆಬ್ರವರಿ ಅಥವಾ ಮಾಚ್‌ರ್‍ನಲ್ಲಿ ಸೂಕ್ತ ಪೀಠದ ಮುಂದೆ ವಿಚಾರಣೆಗೆ ಬರಲಿದೆ ಎಂದು ಹೇಳಿತ್ತು. ನ್ಯಾಯಾಲಯ ಬಳಸಿದ ಈ ಪದಗಳಿಗೆ ಇದೀಗ ಆರ್‌ಎಸ್‌ಎಸ್‌ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಕಾನೂನು, ಸಂವಿಧಾನ  ನಾವು ಗೌರವಿಸುತ್ತೇವೆ

ರಾಮಮಂದಿರ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ನಾವು ಒತ್ತಡ ಹೇರುತ್ತಿಲ್ಲ. ಕಾನೂನು ಹಾಗೂ ಸಂವಿಧಾನವನ್ನು ನಾವು ಗೌರವಿಸುತ್ತೇವೆ. ಹೀಗಾಗಿಯೇ ಅಯೋಧ್ಯೆ ವಿವಾದ ಇತ್ಯರ್ಥ ವಿಳಂಬವಾದರೂ ಸಹಿಸಿಕೊಂಡಿದ್ದೇವೆ. ಸುಪ್ರೀಂಕೋರ್ಟಿನ ಬಗ್ಗೆಯೂ ನಮಗೆ ಗೌರವವಿದೆ. ಆದರೆ, ಹಿಂದುಗಳ ಭಾವನೆಯನ್ನು ಪರಿಗಣಿಸಬೇಕು ಎಂದು ಕೋರುತ್ತೇವೆ.

- ಭಯ್ಯಾಜಿ ಜೋಶಿ, ಆರೆಸ್ಸೆಸ್‌ ಪ್ರಧಾನ ಕಾರ‍್ಯದರ್ಶಿ


ರಹಸ್ಯ ಭೇಟಿಯಾದ ಅಮಿತ್‌ ಶಾ, ಭಾಗ್ವತ್‌!

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆರ್‌ಎಸ್‌ಎಸ್‌ನ ಆಗ್ರಹದ ನಡುವೆಯೇ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಗುರುವಾರ ತಡರಾತ್ರಿ ಇಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು ಭೇಟಿ ಮಾಡಿದ್ದಾರೆ. ರಾತ್ರಿ 2 ಗಂಟೆಗೆ ಆಗಮಿಸಿ ಶಾ, ನೇರವಾಗಿ ಆರ್‌ಎಸ್‌ಎಸ್‌ ಪ್ರಮುಖರ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಭಾಗವತ್‌ ಅವರನ್ನು ಭೇಟಿ ಮಾಡಿದರು. ಈ ಭೇಟಿ ವೇಳೆ ರಾಮಮಂದಿರ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.