ಆದಾಯ ತೆರಿಗೆ ದಾಳಿಗೊಳಗಾದ ರಾಜ್ಯದ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಅವರ ಮೇಲೆ ರಾಜ್ಯದಲ್ಲೇ ಮೊದಲ ಬಾರಿ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಲಿದೆಯೇ? ಇಂತಹದ್ದೊಂದು ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಆದಾಯ ತೆರಿಗೆ ಇಲಾಖೆ ಮೂಲಗಳಿಂದ ಕೇಳಿಬಂದಿವೆ.
ಬೆಂಗಳೂರು(ಆ.08): ಆದಾಯ ತೆರಿಗೆ ದಾಳಿಗೊಳಗಾದ ರಾಜ್ಯದ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಅವರ ಮೇಲೆ ರಾಜ್ಯದಲ್ಲೇ ಮೊದಲ ಬಾರಿ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಲಿದೆಯೇ? ಇಂತಹದ್ದೊಂದು ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಆದಾಯ ತೆರಿಗೆ ಇಲಾಖೆ ಮೂಲಗಳಿಂದ ಕೇಳಿಬಂದಿವೆ.
ಕಳೆದ ವರ್ಷ ಕೇಂದ್ರ ಸರ್ಕಾರವು ಜಾರಿಗೊಳಿ ಸಿರುವ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ -2016 (ಪಿಬಿಟಿಪಿ) ಅನ್ನು ಡಿ.ಕೆ.ಶಿವಕುಮಾರ್ ಮೇಲೆ ದಾಖಲಿಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಬೇನಾಮಿ ಆಸ್ತಿ ಕುರಿತು ಕಠಿಣ ಸಂದೇಶ ಕಳುಹಿಸುವ ಉದ್ದೇಶ ಕೂಡ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿಯೇ ಸೂಕ್ತ ದಾಖಲೆಗಳನ್ನು ಕಲೆ ಹಾಕಲು ಐಟಿ ಯತ್ನಿಸಿದೆ. ಒಂದು ವೇಳೆ ಅಗತ್ಯ ದಾಖಲೆಗಳು ಸಿಕ್ಕಲ್ಲಿ ಈ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯದ ಮಟ್ಟಿಗೆ ಮೊದಲ ಬಾರಿಗೆ ದಾಖಲಿಸುವ ಬೇನಾಮಿ ಆಸ್ತಿ ಪ್ರಕರಣ ಇದಾಗುವ ಸಾಧ್ಯತೆಯಿದೆ.
ಈ ಕಾಯ್ದೆ ಅಡಿ 7 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ. ಇದುವರೆಗೆ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಮೇಲೆ ದಾಳಿ ನಡೆಸಿದಾಗ ಆರ್ಥಿಕ-ತೆರಿಗೆ ವಂಚನೆ ಬಗ್ಗೆ ಹೆಚ್ಚು ಶೋಧಿಸುತ್ತಿದ್ದ ಐಟಿ ಇಲಾಖೆ, ಇಂಧನ ಸಚಿವರ ಮೇಲಿನ ಕಾರ್ಯಾಚರಣೆ ವೇಳೆ ತನ್ನ ಶೈಲಿ ಬದಲಿಸಿದೆ.
ಇದೇ ಪ್ರಥಮ ಎನ್ನುವಂತೆ ದಾಳಿಯ ನಿಗದಿತ ಗುರಿಯನ್ನಷ್ಟೇ ಅಲ್ಲದೆ, ದಾಳಿಗೊಳಗಾದವರ ಆದಾಯದ ಎಲ್ಲ ಸಂಪರ್ಕ ಜಾಲಗಳನ್ನು ತೀವ್ರವಾಗಿ ಕೆದಕಿದೆ. ಇದಕ್ಕೆ ಪುಷ್ಟಿ ನೀಡುವಂತೆ ಐಟಿ ದಾಳಿಗೊಳಗಾದ ಸಚಿವರ ಸೋದರ ಸಂಬಂಧಿಯೂ ಆಗಿರುವ ವಿಧಾನಪರಿಷತ್ ಸದಸ್ಯ ಎಸ್.ರವಿ ಅವರು, ಸಚಿವ ಶಿವಕುಮಾರ್ ಅವರ ಬೇನಾಮಿ ಆಸ್ತಿ ಬಗ್ಗೆಯೇ ಐಟಿ ಅಧಿಕಾರಿಗಳು ತಮ್ಮನ್ನು ಹೆಚ್ಚು ಪ್ರಶ್ನಿಸಿದ್ದರು ಎಂದು ಹೇಳಿಕೆ ನೀಡಿದ್ದರು. ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸುವ ಅಧಿಕಾರವನ್ನು ಆದಾಯ ತೆರಿಗೆ ಇಲಾಖೆ ಹೊಂದಿದೆ. ಹೀಗಾಗಿ ಡಿಕೆಶಿ ಅವರ ಹಣಕಾಸು ವ್ಯವಹಾರದ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ.)ಕ್ಕೆ ವರದಿ ಸಲ್ಲಿಸುವ ಜೊತೆಗೆ ಬೇನಾಮಿ ಕಾಯ್ದೆಯ ಅಸ್ತ್ರ ಹೂಡುವುದೂ ಐಟಿ ಅಧಿಕಾರಿಗಳ ಚಿಂತನೆಯಾಗಿದೆ ಎಂದು ಮೂಲಗಳು ‘ಕನ್ನಡಪ್ರ‘’ಕ್ಕೆ ಮಾಹಿತಿ ನೀಡಿವೆ.
ಡಿಕೆಶಿ ವಿರುದ್ಧದ ಕಾರ್ಯಾಚರಣೆ ಭಿನ್ನ:
ಬೇನಾಮಿ ಆಸ್ತಿ ಕಾಯ್ದೆ ಜಾರಿಗೆ ಬಂದ ನಂತರ ಸಚಿವ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿಎಂ ಆಪ್ತವಲಯದ ಶಾಸಕ ಎಂ.ಟಿ.ಬಿ.ನಾಗರಾಜ್ ಮೇಲೂ ಐಟಿ ದಾಳಿ ನಡೆದಿತ್ತು. ಆದರೆ ಆಗಿನ ದಾಳಿಯು ಸಂಬಂಧಿಸಿದ ಶಾಸಕರು ಹಾಗೂ ನಾಯಕರನ್ನು ಕೇಂದ್ರೀಕರಿಸಿಯಷ್ಟೇ ನಡೆದಿತ್ತು. ಆದರೆ ಶಿವಕುಮಾರ್ ಅವರ ವಿಷಯದಲ್ಲಿ ನಡೆದಿರುವ ಐಟಿ ಕಾರ್ಯಾಚರಣೆ ಭಿನ್ನವಾಗಿದೆ. ಶಿವಕುಮಾರ್ ಅವರ ‘ಸಾಮ್ರಾಜ್ಯ’ದ ಮೇಲೆ ದಾಳಿಗೂ ಮುನ್ನ ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಲಯದ ತನಿಖಾ ವಿಭಾಗದ ಮುಖ್ಯಸ್ಥ ಬಾಲಕೃಷ್ಣನ್ ಅವರು ಸುಮಾರು ಆರೆಂಟು ತಿಂಗಳ ಅವಧಿಯಲ್ಲಿ ಸಚಿವರ ಹಾಗೂ ಅವರ ಆಪ್ತರ ಆರ್ಥಿಕ ಸಂಬಂಧ ಮತ್ತು ಸಂಪರ್ಕ ಜಾಲಗಳ ಕುರಿತು ಮಾಹಿತಿ ಕಲೆ ಹಾಕಿದ್ದರು. ಹೀಗಾಗಿಯೇ ಸಚಿವರ ಮನೆ ಮೇಲಷ್ಟೆ ಅಲ್ಲದೆ ಅವರ ಸೋದರ, ಸಂಸದ ಡಿ.ಕೆ.ಸುರೇಶ್, ಸಂಬಂಧಿಕ ವಿಧಾನಪರಿಷತ್ ಸದಸ್ಯ ಎಸ್.ರವಿ, ಜ್ಯೋತಿಷಿ ದ್ವಾರಕಾನಾಥ್, ಶರ್ಮಾ ಟ್ರಾವೆಲ್ಸ್ ಸಂಸ್ಥೆ ಮಾಲೀಕ ಸುನೀಲ್ ಕುಮಾರ್ ಶರ್ಮಾ, ಆಪ್ತ ಸಹಾಯಕ ಆಂಜನೇಯ ಹಾಗೂ ಹಾಸನದ ಸಚಿನ್ ನಾರಾಯಣ್ ಅವರ ಮನೆ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಶೋಧಿಸಲಾಗಿದೆ. ಅದೂ ಮೂರು ದಿನ ಸತತವಾಗಿ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ಕಡತಗಳಿಗೆ ಐಟಿ ಶೋಧಿಸಿದೆ.
ಬೇನಾಮಿ ಆಸ್ತಿ ಬಗ್ಗೆ ಅತಿ ಹೆಚ್ಚು ಆಸಕ್ತಿ ವಹಿಸಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ ಎಂದು ಮೂಲಗಳು ವಿವರಿಸಿವೆ. ಸೋಮವಾರ ವಿಚಾರಣೆಗೆ ಹಾಜರಾದ ಸಚಿವರು ಹಾಗೂ ಅವರ ಪರಿವಾರದವರಿಗೆ ಬೇನಾಮಿ ಆಸ್ತಿ ವಿಷಯವಾಗಿ ಅತಿ ಹೆಚ್ಚು ಪ್ರಶ್ನಾವಳಿ ನೀಡಿ ಅಧಿಕಾರಿಗಳು ಉತ್ತರ ಕೇಳಿದ್ದಾರೆ. ಅಲ್ಲದೆ ಈ ದಾಳಿ ವೇಳೆ ವಶಪಡಿಸಿಕೊಂಡಿರುವ ಅಗಾಧ ಪ್ರಮಾಣದ ದಾಖಲೆಯನ್ನು ಸ್ಥೂಲವಾಗಿ ಪರಿಶೀಲಿಸಲು ವಿಶೇಷ ತಂಡ ರಚಿಸಲಾಗಿದೆ. ಯಾವುದಾದರೂ ಒಂದು ಅಂಶದಲ್ಲಿ ಬೇನಾಮಿ ಎಂಬುದು ಗೊತ್ತಾದರೆ ಅದನ್ನೇ ಆಧರಿಸಿ ಪಿಟಿಬಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಬೇನಾಮಿ ಕಾಯ್ದೆ ಬಳಸಿದ್ರೆ ಏನಾಗುತ್ತೆ?
ಬೇನಾಮಿ ಆಸ್ತಿ ಹೊಂದಿದ್ದರೆ ಅಂತಹವರಿಗೆ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯಡಿ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ವಿಧಿಸಬಹುದಾಗಿದೆ. ಈ ಕಾಯ್ದೆಯನ್ವಯ ವ್ಯಕ್ತಿಯೊಬ್ಬ 1 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಹೊಂದಿದ್ದರೆ ಆತನಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 25 ಲಕ್ಷ ದಂಡ ವಿಧಿಸಬಹುದು. ಹಾಗೆಯೇ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಇದರೊಂದಿಗೆ ವ್ಯಕ್ತಿ ತಪ್ಪು ಮಾಹಿತಿ ಕೊಟ್ಟಿದ್ದಲ್ಲಿ ಆಸ್ತಿ ಮೇಲೆ ಮಾರುಕಟ್ಟೆ ಬೆಲೆಯ ಆಧಾರದಲ್ಲಿ ಶೇ.10ರಷ್ಟು ದಂಡ ಹಾಗೂ 5 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆಸ್ತಿ ವ್ಯಕ್ತಿಯೊಬ್ಬನ ಹೆಸರಲ್ಲಿದ್ದು, ಅದರ ಮೌಲ್ಯವನ್ನು ಮತ್ತೊಬ್ಬ ಪಾವತಿ ಮಾಡಿದ್ದಲ್ಲಿ ಅದು ಬೇನಾಮಿ ಎಂದು ಪರಿಗಣಿಸಲಾಗುತ್ತದೆ. ಸ್ಥಿರಾಸ್ತಿ, ಚರಾಸ್ತಿ, ಬೇರೆ ಯವರ ಹೆಸರಿನಲ್ಲಿ ಖರೀದಿಸಿರುವ ವಸ್ತುಗಳು, ಕಾನೂನು ದಾಖಲೆಗಳು, ಬ್ಯಾಂಕ್ ಖಾತೆಗಳು, ಹಣಕಾಸು ಭದ್ರತೆಗಳನ್ನು ಬೇನಾಮಿ ಎಂದು ಪರಿಗಣಿಸಲು ಅವಕಾಶವಿದೆ.
