ಬೆಂಗಳೂರು (ಡಿ.25): ಡಿಸೆಂಬರ್ 30ರ ನಂತರ ರೈತರ ಗೋಳು ಕೊನೆಯಾಗುತ್ತಾ?  ರೈತರಿಗೆ ನಗದು ಹಣ ಸಲೀಸಾಗಿ ಸಿಗುವುದೇ? ರೈತರ ಸಮಸ್ಯೆಗೆ ಪರಿಹಾರವಾದರೂ ಏನು? ರೈತರು ಎದುರಿಸಿದ ಸಮಸ್ಯೆಗಳೇನು? ಈ ವರ್ಷ ಕೃಷಿ ಪರಿಸ್ಥಿತಿ ಹೇಗಿದೆ ?

ನೋಟು ನಿಷೇಧ ಕ್ರಮ ಕೈಗೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ರೈತರ ಬೆನ್ನೆಲುಬನ್ನು ಗಟ್ಟಿಯಾಗಿಸಿದ್ದಾರಾ.? ಕೃಷಿ ವಿಮೆ, ಸಣ್ಣ ಪ್ರಮಾಣದ ಸಾಲ ಪ್ರಮಾಣ ಹೆಚ್ಚಳ, ಜನ್'ಧನ್ ಖಾತೆಯ ಮೂಲಕ ನೇರ ರೈತರ ಖಾತೆಗೇ ಸಬ್ಸಿಡಿ ನೀಡುವ ಯೋಜನೆಗೆ ಕೈ ಹಾಕಿದ ಸರ್ಕಾರ, ಈಗ ಹಳೆ ನೋಟು ನಿಷೇಧದ ನಂತರ ಏನು ಮಾಡುತ್ತಿದೆ.? ರೈತರ ಪರಿಸ್ಥಿತಿ ಹೇಗಿದೆ ಎಂದು ನೋಡುತ್ತಾ ಹೋದರೆ, ರೈತರ ಒಂದೊಂದೇ ಕಷ್ಟ ಬಿಚ್ಚಿಕೊಳ್ಳುತ್ತಾ ಹೋಗುತ್ತೆ.

ಸರ್ಕಾರ ನೋಟು ನಿಷೇಧ ಕ್ರಮದ ಬಳಿಕ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು ಕಡೆ ಫಸಲನ್ನು ತಂದರೆ, ಹಣವಿಲ್ಲದೆ ಕೊಳ್ಳುವವರೇ ಇಲ್ಲ, ಇನ್ನೊಂದು ಕಡೆ ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಗ್ರಾಮೀಣ ಬ್ಯಾಂಕುಗಳಲ್ಲಿ ನಗದಿನ ಕೊರತೆಯಿದೆ. ಮನೆ ನಿರ್ವಹಣೆಗೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ಒಂದು ಮುಖ. ನಿಜಕ್ಕೂ ಹಳ್ಳಿಯ ಜನಜೀವನ ಇಷ್ಟೊಂದು ಹದಗೆಟ್ಟಿದೆಯಾ? ಈ ವರ್ಷ ರೈತರ ಸ್ಥಿತಿ ಹೇಗಿದೆ ಎಂಬುವುದರ ಬಗ್ಗೆ ಕೇಂದ್ರ ಕೃಷಿ ಸಚಿವಾಲಯವೇ ಅಂಕಿ ಅಂಶ ಬಿಡುಗಡೆ ಮಾಡಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ ದೇಶದಲ್ಲಿರುವ ಒಟ್ಟು ರೈತರ ಸಂಖ್ಯೆ  26.3 ಕೋಟಿ. ಒಟ್ಟು ಬಿತ್ತನೆಯಾಗಿರುವ ಪ್ರದೇಶ  55.4 ದಶಲಕ್ಷ ಹೆಕ್ಟೇರ್. ರಬಿ ಬೆಳೆ ಕಳೆದ ವರ್ಷಕ್ಕಿಂತ ಶೇ.1.6ರಷ್ಟು ಹೆಚ್ಚಳ ನಿರೀಕ್ಷೆ ಇದೆ. ಗೋಧಿ, ಬೇಳೆ, ಎಣ್ಣೆ ಕಾಳು ಬೆಳೆ ಪ್ರದೇಶ ಹೆಚ್ಚಾಗಿದೆ, ಆದರೆ ಭತ್ತ ಬೆಳೆಯುವ ಪ್ರದೇಶ ಕಳೆದ ಬಾರಿಗಿಂತ ಕಡಿಮೆಯಾಘಿದೆ.

ನೋಟು ರದ್ದತಿಯ ಬಳಿಕ ರೈತರು ಎದುರಿಸಿದ ಸಮಸ್ಯೆಗಳಿಗೆ ಕಾರಣಗಳಿವೆ. ಕಾರ್ಡ್​ ಬಳಕೆ ಗೊತ್ತಿಲ್ಲದ ರೈತರ ಸಂಖ್ಯೆ ದೇಶದಲ್ಲಿ ಈಗಲೂ ಹೆಚ್ಚಿದೆ. ಅವರಿಗೆ ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಜ್ಞಾನ ಇಲ್ಲ. ಅನಕ್ಷರಸ್ಥ ರೈತರು ಇನ್ನೂ ಬ್ಯಾಂಕಿಂಗ್ ವ್ಯವಸ್ಥೆಗೇ ಬಂದಿಲ್ಲ, ಅಂತಹುದರಲ್ಲಿ
ಬ್ಯಾಂಕಿಂಗ್ ಗೊತ್ತಿಲ್ಲದವರು, ಆನ್​ಲೈನ್​ಗೆ ಬರುವುದು ಹೇಗೆ? ಹಳ್ಳಿಗಳಲ್ಲಿ ಮೊಬೈಲ್ ನೆಟ್​ವರ್ಕ್ ಕೊರತೆ ಬಹುದೊಡ್ಡ ಸಮಸ್ಯೆ. ಸಿಗ್ನಲ್ ಸಿಗದ ಊರುಗಳಲ್ಲಿ, ನೆಟ್ ಬ್ಯಾಂಕಿಂಗ್ ಸಾಧ್ಯವೇ? ಇಂಥ ಹಲವು ಸಮಸ್ಯೆ ಸವಾಲುಗಳ ಮಧ್ಯೆ,  ರೈತರು ಕೂಲಿ ಕಾರ್ಮಿಕರ ವೇತನಕ್ಕೂ ಹಣ ಸಿಗದೆ ಪರದಾಡಿದ್ದಾರೆ.

ಹಾಗಾದರೆ, ಇವುಗಳಿಗೆಲ್ಲ ಪರಿಹಾರವೇ ಇಲ್ಲ ಎಂದು ಹೇಳುವಂತಿಲ್ಲ. ಆದರೆ, ಅವು ತಕ್ಷಣ ಸಾಧ್ಯವಿಲ್ಲ ಎನ್ನುವುದಂತೂ ಸತ್ಯ. ಇದಕ್ಕೆ ಕೆಲವು ವರ್ಷಗಳು ಬೇಕಾಗಬಹುದೇನೋ.  ಏಕೆಂದರೆ, ಮೊದಲು ಗಟ್ಟಿಯಾಗಬೇಕಿರುವದು ರೈತರ ಬೆನ್ನೆಲುಬು.


ರೈತರ ಸಮಸ್ಯೆಗೆ ಏನು ಪರಿಹಾರ?
ಕೃಷಿ ಉತ್ಪನ್ನಗಳಿಗೆ ಇ-ಮಾರ್ಕೆಟಿಂಗ್ ವ್ಯವಸ್ಥೆ
ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್ ಸ್ಕೀಂಗಳ ಜಾರಿ
ರೈತರಿಗೆ ಆದಾಯ ಖಾತರಿ ಯೋಜನೆ ಜಾರಿ
ಹಾಲು ಸಹಕಾರಿ ಸಂಘಗಳ ಕಂಪ್ಯೂಟರೀಕರಣ
ಬ್ಯಾಂಕ್​ ಮೂಲಕವೇ ರೈತರಿಗೆ ಬೆಳೆಯ ಪಾವತಿ
ಸಬ್ಸಿಡಿ ಹಣವನ್ನು ನೇರ ಬ್ಯಾಂಕ್​ಗೇ ಕೊಡುವುದು
ಎಪಿಎಂಸಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ


ಇದರಿಂದ ರೈತರ ಸಮಸ್ಯೆಗೆ ಪರಿಹಾರವೂ ಸಿಗಲಿದೆ. ರೈತರ ಬದುಕೂ ಹಸನಾಗಲಿದೆ. ಆದರೆ, ಎಲ್ಲದಕ್ಕೂ ಮೊದಲು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾಗುತ್ತೆ. ಇಲ್ಲದಿದ್ದರೆ, ಈ ನೋಟು ನಿಷೇಧ ಯೋಜನೆ ರೈತರಿಗೆ ಶಾಪವಾದೀತು.