ಆರೋಪ ಮಾಡಿರುವ ನಮ್ಮ ಪಕ್ಷದ ಶಾಸಕರಾದ ರಾಜು ಕಾಗೆ, ಬಿ.ಆರ್. ಪಾಟೀಲ ಹಾಗೂ ಬೇಳೂರು ಗೋಪಾಲಕೃಷ್ಣ ಅವರ ಜತೆ ಚರ್ಚಿಸುವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 ರಾಯಚೂರು : ‘ಅನುದಾನ ಬಿಡುಗಡೆ, ಸಚಿವರ ಕಾರ್ಯವೈಖರಿ, ಭ್ರಷ್ಟಾಚಾರ- ಹೀಗೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಆರೋಪ ಮಾಡಿರುವ ನಮ್ಮ ಪಕ್ಷದ ಶಾಸಕರಾದ ರಾಜು ಕಾಗೆ, ಬಿ.ಆರ್. ಪಾಟೀಲ ಹಾಗೂ ಬೇಳೂರು ಗೋಪಾಲಕೃಷ್ಣ ಅವರ ಜತೆ ಚರ್ಚಿಸುವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದ ಅವರು, ರಾಜು ಕಾಗೆಯವರು ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ‘ರಾಜು ಕಾಗೆಯವರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಪ್ರಾರಂಭವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಅವರೊಂದಿಗೆ ಚರ್ಚಿಸುತ್ತೇನೆ. ಅಗತ್ಯವಿರುವ ಕ್ಷೇತ್ರಗಳಿಗೆ ವಿಶೇಷ ಅನುದಾನ ನೀಡಲಾಗುವುದು’ ಎಂದು ತಿಳಿಸಿದರು.

ವಸತಿಗಾಗಿ ಹಣ ಆರೋಪಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂಬ ಸಾಗರದ ಕಾಂಗ್ರೆಸ್‌ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅವರ ಜೊತೆಗೂ ಮಾತನಾಡುತ್ತೇನೆ. ಈ ಕುರಿತು ಅವರಿಂದ ಮಾಹಿತಿ ಪಡೆಯುತ್ತೇನೆ ಎಂದರು.

ಇದೇ ವೇಳೆ, ಶಾಸಕ ಬಿ.ಆರ್‌.ಪಾಟೀಲ್‌ ಅವರ ಆರೋಪ ಕುರಿತು ಪ್ರತಿಕ್ರಿಯಿಸಿ, ವಸತಿ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಶಾಸಕ ಬಿ.ಆರ್.ಪಾಟೀಲ್ ಅವರು ಜೂ.25 ರಂದು ನನ್ನನ್ನು ಖುದ್ದಾಗಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ ಎಂದರು.

- ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆ ಪ್ರಾರಂಭವಾಗದಿರುವ ಬಗ್ಗೆ ಶಾಸಕ ಕಾಗೆ ಅಸಮಾಧಾನ

- ವಸತಿ ಯೋಜನೆಯಡಿ ಮನೆ ಪಡೆಯಲೂ ಲಂಚ ಕೊಡುವ ಸ್ಥಿತಿ ಎಂದು ಬಿಆರ್‌ಪಿ ಆಕ್ರೋಶ

- ವಸತಿ ಸ್ಕೀಂ ಲಂಚಾರೋಪ ಸಂಬಂಧ ಸಚಿವ ಜಮೀರ್‌ ರಾಜೀನಾಮೆಗೆ ಬೇಳೂರು ಆಗ್ರಹ

- ಈ ಎಲ್ಲ ಶಾಸಕರ ಜತೆ ಮಾತನಾಡುವೆ, ಅಸಮಾಧಾನ ಬಗೆಹರಿಸುವೆ ಎಂದ ಸಿದ್ದರಾಮಯ್ಯ