'ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುವುದು ನನ್ನ ಗುರಿ, ಇದರಲ್ಲಿ ಯಾವುದೇ ರಾಜಿಯಿಲ್ಲ ಮತ್ತು ಇದನ್ನು ರಾಜಕೀಯಕ್ಕಾಗಿ ಮಾಡುತ್ತಿಲ್ಲ''ಮಾತಿನಿಂದ ಜಾತಿ ನಿಮೂರ್ಲನೆ ಮಾಡುವುದು ಅಸಾಧ್ಯ.ಆರ್ಥಿಕ, ಸಾಮಾಜಿಕ ಸಮಾನತೆ ಬಂದಾಗ ಮಾತ್ರ ಜಾತಿ ವ್ಯವಸ್ಥೆ ನಿರ್ಮೂಲನೆ ಸಾಧ್ಯ'

ಬೆಂಗಳೂರು: ಸೃಜನಶೀಲ ಸಮಾಜವಾಗಿರುವ ವಿಶ್ವಕರ್ಮ ಸಮುದಾಯದ ವಿಶೇಷ ಕಲೆಯನ್ನು ಉಳಿಸಿ, ಬೆಳೆಸಲು ವಿಶ್ವವಿದ್ಯಾಲಯ ಸ್ಥಾಪಿಸುವ ಸಂಬಂಧ ಚರ್ಚಿಸಿ ಸರ್ಕಾರ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ನಿರ್ವಹಣೆ ಮಾಡುವುದು ಸುಲಭದ ಮಾತಲ್ಲ. ಹೀಗಾಗಿ ವಿವಿ ಸ್ಥಾಪಿಸುವ ಕುರಿತು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರೊಂದಿಗೆ ಸಾಧಕ ಬಾಧಕಗಳನ್ನು ಚರ್ಚಿಸಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ.

ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುವುದು ನನ್ನ ಗುರಿ. ಇದರಲ್ಲಿ ಯಾವುದೇ ರಾಜಿಯಿಲ್ಲ ಮತ್ತು ಇದನ್ನು ರಾಜಕೀಯಕ್ಕಾಗಿ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಿಂದುಳಿದ 40 ಸಮುದಾಯದಗಳಿಗೆ ಎರಡು ಎಕರೆಯಂತೆ 90 ಎಕರೆ ಜಾಗ ನೀಡುತ್ತಿದ್ದೇವೆ. ಅದರಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಶಿಕ್ಷಣಕ್ಕೆ ಅವಶ್ಯವಿರುವ ಜಾಗವನ್ನು ನೀಡಲಾಗುವುದು ಹಾಗೂ ಈಗಾಗಲೇ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ₹25 ಕೋಟಿ ನೀಡಲಾಗಿದ್ದು, ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು.

ವಿಶ್ವಕರ್ಮ ಸಮುದಾಯವು ದೇವರನ್ನೇ ಸೃಷ್ಟಿಸುವ ಮೂಲಕ ತುಂಬಾ ಸೃಜನಶೀಲತೆ ಹೊಂದಿದೆ. ಜಕಣಾಚಾರಿಯ ಶಿಲ್ಪಕಲೆಯನ್ನು ಮತ್ತೊಬ್ಬರು ಮಾಡಲು ಸಾಧ್ಯವಿಲ್ಲ ಎಂದ ಮುಖ್ಯಮಂತ್ರಿಗಳು, ಮಾತಿನಿಂದ ಜಾತಿ ನಿಮೂರ್ಲನೆ ಮಾಡುವುದು ಅಸಾಧ್ಯ.ಆರ್ಥಿಕ, ಸಾಮಾಜಿಕ ಸಮಾನತೆ ಬಂದಾಗ ಮಾತ್ರ ಜಾತಿ ವ್ಯವಸ್ಥೆ ನಿರ್ಮೂಲನೆ ಸಾಧ್ಯ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾಜವನ್ನು ಹಿಂದುಳಿಯುವಂತೆ ಮಾಡಲು ಪ್ರಯತ್ನಿಸುತ್ತಾರೆ. ಇವರು ಯಾರೆಂದು ಗುರುತಿಸಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಇದಕ್ಕೂ ಮೊದಲು ಮಾತನಾಡಿದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ವಿಶ್ವಕರ್ಮ ವಿವಿ ನಿರ್ಮಿಸಿ ಐದು ಕುಲಕಸುಬುಗಳೊಂದಿಗೆ ಎಂಜಿನಿಯರಿಂಗ್ ಸೇರಿಸಿದರೆ ಸಮುದಾಯದ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಜಗತ್ತಿನಾದ್ಯಂತ ಹಬ್ಬಿರುವ ವಿಶ್ವಕರ್ಮ ಸಮುದಾಯಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು.

ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೇಳಿರುವಂತೆ ಸಮಾಜವು ವಿದ್ಯೆ, ಸಂಘಟನೆ ಮತ್ತು ಹೋರಾಟಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸರ್ಕಾರಿ ಸೌಲಭ್ಯಗಳ ಜತೆಗೆ ಸಂಘ ಸಂಸ್ಥೆಗಳು ಸಮಾಜದ ಪ್ರಗತಿಗೆ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

ಸಮಾಜಕಲ್ಯಾಣ ಸಚಿವ ಎಚ್. ಆಂಜನೇಯ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದವರು, ಶೋಷಿತರು ಮತ್ತು ದುರ್ಬಲರ ಕಷ್ಟವನ್ನು ಅರಿತಿದ್ದಾರೆ. ಆದ್ದರಿಂದಲೇ ಅಹಿಂದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು. ವಿಶ್ವಕರ್ಮ ಮಹಾಸಭಾ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಿಎಂಗೆ ಸಲ್ಲಿಸಿತು.