Asianet Suvarna News Asianet Suvarna News

ಡಾ.ರಾಜ್‌ ರೀತಿಯಲ್ಲೇ ಅಂಬಿ ಸ್ಮಾರಕ

ಅಂಬರೀಷ್‌ ಅವರ ಸ್ಮಾರಕವನ್ನು ಸಹ ಡಾ.ರಾಜ್‌ ಸ್ಮಾರಕದ ಮಾದರಿಯಲ್ಲಿ ಕಂಠೀರವ ಸ್ಟುಡಿಯೋದಲ್ಲೇ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

Will Build Ambareesh Memorial Says CM HD Kumaraswamy
Author
Bengaluru, First Published Nov 27, 2018, 10:35 AM IST

ಮಂಡ್ಯ :  ಕನ್ನಡ ಚಿತ್ರರಂಗದ ದಿಗ್ಗಜ ಅಂಬರೀಷ್‌ ಅವರ ಸ್ಮಾರಕವನ್ನು ಸಹ ಡಾ.ರಾಜ್‌ ಸ್ಮಾರಕದ ಮಾದರಿಯಲ್ಲಿ ಕಂಠೀರವ ಸ್ಟುಡಿಯೋದಲ್ಲೇ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಜೊತೆಗೆ ಅಂಬರೀಷ್‌ ಹೆಸರಲ್ಲಿ ಸರ್ಕಾರದ ವತಿಯಿಂದ ಯೋಜನೆ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದೂ ತಿಳಿಸಿದ್ದಾರೆ.

ಅಂಬರೀಷ್‌ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯುವ ಮುನ್ನ ನಗರದ ಸರ್‌ ಎಂ.ವಿ. ಕ್ರೀಡಾಂಗಣದಲ್ಲಿ ಸೋಮವಾರ ಮಾತನಾಡಿದ ಅವರು, ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿರುವ ಅಂಬರೀಷ್‌ ರವರ ಸ್ಮಾರಕವನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿಯೇ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಅಂಬರೀಷ್‌ ಅವರು ಕೇವಲ ಒಂದು ಸಮಾಜಕ್ಕೆ ಮೀಸಲಾದವರಲ್ಲ, ಅವರು ಎಲ್ಲಾ ವರ್ಗದ ಜನತೆಗೂ ಬೇಕಾದವರಾಗಿದ್ದಾರೆ. ಅವರು ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ ಅಪಾರ. ಡಾ.ರಾಜ್‌ಕುಮಾರ್‌ರವರ ಕನಸಾಗಿದ್ದ ಕಲಾವಿದರ ಭವನವನ್ನು ಪೂರ್ಣಗೊಳಿಸಿದವರು ಎಂದು ಸ್ಮರಿಸಿದರು.

ಕಲಾವಿದರು ನಾಡಿಗೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಹಲವಾರು ವಿಷಯಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಕೊಡಬೇಕಾದದ್ದು ನಮ್ಮ ಆದ್ಯ ಕರ್ತವ್ಯ. ಅಲ್ಲದೆ, ಅವರು ಚಿತ್ರಗಳಲ್ಲಿ ನಟಿಸುವ ಮೂಲಕ ಸರ್ಕಾರಕ್ಕೆ ತೆರಿಗೆ ಕಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಮಾರಕವನ್ನು ನಿರ್ಮಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.

ಅಂಬರೀಷ್‌ ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲಿ ಕಟ್ಟುವುದು ಬೇಡ ಎಂದು ವಕೀಲರೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ನನ್ನ ಗಮನಕ್ಕೆ ಬಂದಿದೆ. ಕನ್ನಡ ಹಾಗೂ ರಾಜ್ಯಕ್ಕೆ ಸೇವೆ ಸಲ್ಲಿಸಿದವರಿಗೆ ಗೌರವ ಸಲ್ಲಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯ. ಸ್ಮಾರಕ ಬೇಡ ಎಂದು ಅರ್ಜಿ ಸಲ್ಲಿಸಿರುವ ವಕೀಲರು ಮೊದಲು ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಂಬರೀಷ್‌ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಯೋಜನೆ ರೂಪಿಸಲಾಗುವುದು. ಯಾವ ರೀತಿ ಯೋಜನೆ ರೂಪಿಸಬೇಕು, ಏನೇನು ಕಾರ್ಯಕ್ರಮಗಳನ್ನು ನೀಡಬೇಕು ಎಂಬುದರ ಕುರಿತಂತೆ ಎಲ್ಲರಿಂದಲೂ ಮಾಹಿತಿ ಪಡೆದು, ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸವಾಲುಗಳ ನಡುವೆ ಜಿಲ್ಲೆಗೆ ತರಲಾಗಿತ್ತು:  ಮಂಡ್ಯದಲ್ಲಿ ಅಂಬರೀಷ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವುದು ಸರ್ಕಾರಕ್ಕೆ ಸವಾಲಾಗಿತ್ತು. ಹಲವಾರು ಸಮಸ್ಯೆಗಳ ನಡುವೆ ಅಂತಿಮ ದರ್ಶನ ಸುಸೂತ್ರವಾಗಿ ನಡೆದಿದ್ದು, ಇದಕ್ಕೆ ಕಾರಣರಾದ ಜಿಲ್ಲೆಯ ಜನತೆಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಅಂಬರೀಷ್‌ ಅವರು ಸ್ವಚ್ಛ ಮನಸ್ಸಿನಿಂದಾಗಿ ಅಂತ್ಯ ಕಾಲದಲ್ಲೂ ಸುಗಮವಾದ ರೀತಿ ಕಾರ್ಯ ನಡೆಯುತ್ತಿದೆ. ಎಲ್ಲರೂ ಕೊಟ್ಟಸಹಕಾರಕ್ಕೆ ನಾನು ಆಭಾರಿ ಎಂದು ಹೇಳಿದರು.

ಲಕ್ಷಾಂತರ ಜನರು ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಷ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಶಿಸ್ತುಬದ್ಧವಾಗಿ ಯಾವುದೇ ಗೊಂದಲ-ಗದ್ದಲಗಳಿಗೆ ಅವಕಾಶ ನೀಡದೆ ಮಂಡ್ಯದ ಜನತೆ ನಡೆದುಕೊಂಡರು. ಇದು ಮಂಡ್ಯದ ಜನತೆ ಹಾಗೂ ಎಲ್ಲರೂ ಅವರ ಮೇಲೆ ಇಟ್ಟಿರುವ ಪ್ರೀತಿ ಎಂಥದ್ದು ಎಂಬುದು ತಿಳಿಯುತ್ತದೆ ಎಂದರು.

ಆರೋಗ್ಯ ಬಗ್ಗೆ ಗಮನ ಹರಿಸದ್ದು ದುರಂತ:  ಅಂಬರೀಷ್‌ ಅವರು ಆಗಾಗ್ಗೆ ಕರೆ ಮಾಡಿ ನನ್ನ ಆರೋಗ್ಯದ ಬಗ್ಗೆ ಎಚ್ಚರಿಕೆ ಕೊಡುತ್ತಿದ್ದರು. ನಿಮ್ಮ ಸೇವೆ ಸಮಾಜಕ್ಕೆ ಬೇಕು ಎಂದು ಹೇಳುತ್ತಿದ್ದರು. ನನಗಿಂತ ಅಂಬರೀಷ್‌ ಅವರು ಎಂಟು ವರ್ಷ ದೊಡ್ಡವರು. ನನಗೆ ಅವರು ಅಣ್ಣನ ರೀತಿಯಿದ್ದರು. ಆದರೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದು ದುರಂತ ಎಂದರು.

Follow Us:
Download App:
  • android
  • ios