ವಿರೋಧದ ನಡುವೆಯೂ ಕೃಷ್ಣಾ ನದಿ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಅವರು ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಜಪ ನೆರವೇರಿಸಿದರು.ಮೊದಲು ಶ್ರೀ ಕ್ಷೇತ್ರ ಮಹಾಬಲೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ನಂತರ ಪಂಚನದಿಗಳ ಉಗಮ ಸ್ಥಾನ ಪಂಚಗಂಗಾ ಕ್ಷೇತ್ರದಲ್ಲಿ ಮತ್ತು ಕೃಷ್ಣಾಯೀ ಮಂದಿರದಲ್ಲಿ ಪೂಜೆ ಸಲ್ಲಿಸಲಾಯಿತು.

ವಿಜಯಪುರ: ವಿರೋಧದ ನಡುವೆಯೂ ಕೃಷ್ಣಾ ನದಿ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಅವರು ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಜಪ ನೆರವೇರಿಸಿದರು.
ಮೊದಲು ಶ್ರೀ ಕ್ಷೇತ್ರ ಮಹಾಬಲೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ನಂತರ ಪಂಚನದಿಗಳ ಉಗಮ ಸ್ಥಾನ ಪಂಚಗಂಗಾ ಕ್ಷೇತ್ರದಲ್ಲಿ ಮತ್ತು ಕೃಷ್ಣಾಯೀ ಮಂದಿರದಲ್ಲಿ ಪೂಜೆ ಸಲ್ಲಿಸಲಾಯಿತು. ಕಳೆದ ವರ್ಷ ತೀವ್ರ ಬರಗಾಲ ಉಂಟಾಗಿತ್ತು. ಹೀಗಾಗಿ ರಾಜ್ಯದ ರೈತರ ಸ್ಥಿತಿ ಗಂಭೀರವಾಗಿತ್ತು. ಆದರೆ, ಪ್ರಸಕ್ತ ಸಾಲಿ ನಲ್ಲಿ ಉತ್ತಮ ಮಳೆ, ಬೆಳೆಯಾಗಿ ರೈತರು ನೆಮ್ಮದಿ ಯಿಂದ ಇರಲಿ ಎಂದು ಪತ್ನಿ ಆಶಾ ಅವರೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದಾಗಿ ಪಾಟೀಲ ತಿಳಿಸಿದರು.

ಈ ವಿಚಾರವಾಗಿ ಮಾತನಾಡಿದ ಅವರು ರಾಜ್ಯದಲ್ಲಿ ನದಿಗಳು, ಜಲಾಶಯಗಳು ತುಂಬಿ ಹರಿದು, ಸಮೃದ್ಧಿಯಾಗಲಿ ಎಂಬ ಕಾರಣಕ್ಕೆ ಈ ಪೂಜೆ ನಡೆಸಲಾಗಿದೆ. ಕೃಷ್ಣಾ ಹಾಗೂ ಕಾವೇರಿ ನದಿಗಳು ಕರ್ನಾಟಕದ ಜೀವ ನದಿಗಳು. ಕಾವೇರಿ ನದಿಯ ಉಗಮ ಸ್ಥಾನದಲ್ಲಿ ಈ ಹಿಂದೆ ಪೂಜೆ ಸಲ್ಲಿಸಿದ್ದು, ಇದೇ ಮೊದಲ ಬಾರಿಗೆ ಕೃಷ್ಣಾ ನದಿಯ ಉಗಮ ಸ್ಥಾನದ ಮಹಾಬಲೇಶ್ವರ ಕ್ಷೇತ್ರಕ್ಕೆ ಬಂದಿದ್ದೇನೆ. ತಾಯಿ ಕೃಷ್ಣಾ ಮಹಾರಾಷ್ಟ್ರದಲ್ಲಿ ಹುಟ್ಟಿ, ಕರ್ನಾಟಕ ಹಾಗೂ ಆಂಧ್ರದಲ್ಲಿ ಹರಿದು ಸಮುದ್ರ ಸೇರುವ ಮುನ್ನ ಕೋಟ್ಯಂತರ ಜನರಿಗೆ, ಪಶು, ಪಕ್ಷಿ ಸೇರಿ ಎಲ್ಲ ಜೀವ ಜಲ ಸಂಕುಲಕ್ಕೆ ಆಧಾರವಾಗಿದ್ದಾಳೆ. ಈ ಪೂಜೆ ಎಲ್ಲರಿಗೂ ಶ್ರೇಯಸ್ಸು ತರಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ಸಿಂಗ್‌ ಅವರೂ ಪತ್ನಿ ಸಮೇತ ಈ ಪೂಜೆಯಲ್ಲಿ ಭಾಗವಹಿಸಿದ್ದರು. ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕರಾದ ಸಿದ್ದು ನ್ಯಾಮಗೌಡ, ಗಣೇಶ ಹುಕ್ಕೇರಿ, ಕೃಷ್ಣಾ ಭಾಗ್ಯ ಜಲ ನಿಗಮ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌, ಕರ್ನಾಟಕ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಇಲಾಖೆ ಉಪ ಕಾರ್ಯದರ್ಶಿ ಅನಿಲ್‌ ಕುಮಾರ್‌ ಮರಳಿ, ಮುಖ್ಯ ಅಭಿಯಂತರರಾದ ಜಗನ್ನಾಥ ರಡ್ಡಿ, ಕೆ.ಎಫ್‌. ಹುಲಕುಂದ ಪಾಲ್ಗೊಂಡಿದ್ದರು.

ವೆಚ್ಚ ನಾನೇ ಭರಿಸುವೆ: ಎಂ.ಬಿ. ಪಾಟೀಲ್

ಕೃಷ್ಣಾ ನದಿಯ ಉಗಮ ಸ್ಥಳವಾದ ಮಹಾಬಲೇಶ್ವರ ಹಾಗೂ ಕಾವೇರಿ ನದಿಯ ಉಗಮ ಸ್ಥಳ ತಲಕಾವೇರಿ​ಯಲ್ಲಿ ಮಳೆಗಾಗಿ ಸರ್ಕಾರಿ ವೆಚ್ಚದಲ್ಲಿ ಪರ್ಜನ್ಯ ಯಾಗ ಮಾಡುವ ಮೂಲಕ ತೀವ್ರ ವಿವಾದಕ್ಕೆ ಸಿಲುಕಿದ್ದ ಜಲಸಂ​ಪನ್ಮೂಲ ಸಚಿವ ಎಂ.ಬಿ.​ಪಾಟೀಲ್‌ ಇದೀಗ ಪೂಜಾ ವೆಚ್ಚವನ್ನು ತಾವೇ ಭರಿಸುವುದಾಗಿ ಪ್ರಕಟಿ​ಸುವ ಮೂಲಕ ವಿವಾದಕ್ಕೆ ತೆರೆ ಎಳೆ​ಯುವ ಪ್ರಯತ್ನ ನಡೆಸಿದ್ದಾರೆ.

ಈ ವಿವಾದದ ನಡುವೆಯೇ ಶುಕ್ರವಾರ ಮಹಾ​ಬಲೇಶ್ವರದಲ್ಲಿ ಪೂಜೆ ಸಾಂಗವಾಗಿ ನೆರ​ವೇ​​ರಿದೆ. ಈ ಕುರಿತು ಶುಕ್ರವಾರ ಪ್ರಕ​ಟಣೆ ನೀಡಿರುವ ಅವರು, ‘ಉಭಯ ನದಿಗಳ ಉಗಮ ಸ್ಥಳದಲ್ಲಿ ಪೂಜೆಗೆ ಕರ್ನಾ​ಟಕ ನೀರಾವರಿ ನಿಗ​ಮ ಮತ್ತು ಕಾವೇರಿ ನೀರಾ​ವರಿ ನಿಗಮ​ದಿಂದ ತಲಾ 10 ಲಕ್ಷ ರು.ಗಳನ್ನು ವೆಚ್ಚ ಮಾಡ​ಲು ತೀರ್ಮಾ​ನಿಸ​ಲಾಗಿತ್ತು. ಆದರೆ ಪೂಜೆಗೆ ಅನಗತ್ಯ ವೆಚ್ಚ ಮಾಡ​ಲಾಗುತ್ತಿದೆ ಎಂಬ ಮಾಧ್ಯಮಗಳ ಟೀಕೆ​ಯಿಂದ ತಮ್ಮ ಮನಸ್ಸಿಗೆ ನೋವಾಗಿದೆ. ಹೀಗಾಗಿ ಪೂಜೆಗೆ ತಗಲುವ ವೆಚ್ಚವನ್ನು ನಾನು ಹಾಗೂ ನನ್ನ ಸ್ನೇಹಿತರೇ ಸೇರಿ ಭರಿಸುತ್ತೇವೆ' ಸ್ಪಷ್ಟನೆ ನೀಡಿದ್ದಾರೆ.