ಹೆಂಡತಿಯ ಹೆಸರಿನಿಂದಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ!!

Wifes Unique Name Makes Youth File Police Complaint
Highlights

ಪತ್ನಿಯ ವಿಭಿನ್ನ ಹೆಸರಿನಿಂದಾಗಿ ನವವಿವಾಹಿತ ಯುವಕನೊಬ್ಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ನವದೆಹಲಿ [ಮೇ.11]: ಕಳ್ಳತನ, ವಂಚನೆ, ಕೊಲೆ ಮುಂತಾದ ವಿಚಾರಗಳಿಗೆ ಜನರು ಪೊಲೀಸ್ ಠಾಣೆಯ ಮೆಟ್ಟಿಲೇರುವುದು ಸಾಮಾನ್ಯ. ಆದರೆ ಕೇರಳದಲ್ಲಿ ನವವಿವಾಹಿತ ಯುವಕನೊಬ್ಬ ಪತ್ನಿಯ ಹೆಸರಿನಿಂದಾಗಿ ಪೊಲೀಸ್ ದೂರು ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೇರಳದ ಕಲ್ಲಿಕೋಟೆಯ ಯುವಕ ವಿಭೀಶ್ ಎಂಬಾತ ಇತ್ತೀಚೆಗೆ ವಿವಾಹವಾಗಿದ್ದಾನೆ. ಆತನು ತನ್ನ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದ ಮದುವೆ ಆಹ್ವಾನ ಪತ್ರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಆಹ್ವಾನ ಪತ್ರಿಕೆ ವೈರಲ್ ಆಗಲು ಕಾರಣವೊಂದಿದೆ. ಅದೇನೆಂದರೆ ವಧುವಿನ ಹೆಸರು! ಹೆಸರಲ್ಲೇನಿದೆ ಅಂತಿರಾ? ಆಕೆಯ ಹೆಸರು- ಧ್ಯಾನೂರಹಣಗಿತಿ [Dhyanoorahangithy]-  ಅಪರೂಪ ಹಾಗೂ ವಿಭಿನ್ನವಾಗಿದೆ. 

ವಧುವಿನ ಹೆಸರನ್ನು ಸರಿಯಾಗಿ ಉಚ್ಚರಿಸುವವರಿಗೆ ಮಾತ್ರ ಮದುವೆಗೆ ಆಹ್ವಾನವೆಂಬ ಒಕ್ಕಣೆಯೊಂದಿಗೆ ಕೆಲವರು ಅಹ್ವಾನ ಪತ್ರಿಕೆಯನ್ನು ವೈರಲ್ ಮಾಡಿದ್ದಾರೆ. ಅದಾದ ಬಳಿಕ, ವಿಭೀಶ್ ಹಾಗೂ ಆತನ ತಂದೆಯ ಫೋನ್‌ಗೆ ಬಿಡುವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುತೂಹಲದಿಂದ ಫೋನ್ ಮಾಡಿ ಕೆಲವರು ವಿಚಾರಿಸಿದರೆ, ಇನ್ನೂ ಹಲವರು ಹೆಸರಿನ ಅರ್ಥವನ್ನು ತಿಳಿಯಲು ಕರೆ ಮಾಡಲಾರಂಭಿಸಿದ್ದಾರೆ.  ಆದರೆ ಕೆಲವರು ಲೇವಡಿ/ಬೈಗುಳಗಳ ಮಟ್ಟಿಗೆ ಇಳಿದಿದ್ದಾರೆ. ಇವುಗಳಿಂದ ಸುಸ್ತಾದ ವಿಭೀಶ್ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. 

 ಧ್ಯಾನೂರಹಣಗಿತಿ ಪ್ರಕಾರ, ಆಕೆಯ ತಂದೆ ಸಾಹಿತ್ಯ ಪ್ರೇಮಿಯಾಗಿದ್ದು, ತನ್ನ ಮಗಳಿಗೆ ವಿಭಿನ್ನ ಹೆಸರಿಡುವ ಉದ್ದೇಶದಿಂದ ಈ ಹೆಸರನ್ನು ಇಟ್ಟಿದ್ದಾರೆ. ಮನೆಯವರು ಕೂಡಾ ಆಕೆಯನ್ನು ಧ್ಯಾನು ಎಂದು ಕರೆಯುತ್ತಾರೆನ್ನಲಾಗಿದೆ. ಪತ್ನಿಯ ಹೆಸರಿನಿಂದ ವಿಭೀಶ್‌ಗೆ ಯಾವುದೇ ಸಮಸ್ಯೆಯಿಲ್ಲ, ಆದರೆ ಅನಗತ್ಯ ಕರೆಗಳು ತಲೆನೋವುಂಟುಮಾಡಿದೆ.    

loader