ಬೆಂಗಳೂರು :  ನಕಲಿ ಕ್ರೆಡಿಟ್‌ ಕಾರ್ಡ್‌ ಬಳಸಿ ಖರೀದಿಸಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಚಿನ್ನದಂಗಡಿಗೆ ಅಡಮಾನವಿಟ್ಟು ಸಾಲ ಪಡೆದ ಪ್ರಕರಣ ತನಿಖೆ ನಡೆಸಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌, ಅದೇ ಚಿನ್ನಾಭರಣಗಳನ್ನು ಚಿನ್ನದಂಗಡಿಯಿಂದ ಜಪ್ತಿ ಮಾಡಿ ಕೋರ್ಟ್‌ ಆದೇಶದ ಮೂಲಕವೇ ಕಳ್ಳನ ಪತ್ನಿಗೆ ಕೊಡಿಸಿದ ವಂಚನೆ ಪ್ರಕರಣವನ್ನು ವಿಚಾರಣೆ ವೇಳೆ ಬಯಲಿಗೆ ಎಳೆದಿರುವ ಹೈಕೋರ್ಟ್‌ ಈ ಬಗ್ಗೆ ತನಿಖೆಗೆ ನಿರ್ದೇಶಿಸಿದೆ.

ಪ್ರಕರಣವನ್ನು ಚೀಫ್‌ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ (ಸಿಎಂಎಂ) ಖುದ್ದಾಗಿ ತನಿಖೆ ನಡೆಸಬೇಕು. ಇಲ್ಲವೇ ಸಿಎಂಎಂ ಕೋರ್ಟ್‌ನ ಸಕ್ಷಮ ಅಧಿಕಾರಿಗೆ ತನಿಖೆಯ ಹೊಣೆ ಹೊರಿಸಬೇಕು. ಇನ್ಸ್‌ಪೆಕ್ಟರ್‌ ಮೂಲಕ ಪಡೆದ ಚಿನ್ನಾಭರಣಗಳನ್ನು ಕಳ್ಳನ ಪತ್ನಿಯು ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಒಪ್ಪಿಸಬೇಕು. ಪ್ರಕರಣದ ಸಮಗ್ರ ತನಿಖಾ ವರದಿಯನ್ನು 2019ರ ಆ.31ರೊಳಗೆ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶಿಸಿದೆ.

ಪ್ರಕರಣವೇನು?

2011ರ ಆ.28ರಂದು ಈ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸಂಪಿಗೆಹಳ್ಳಿ ಠಾಣಾ ಪೊಲೀಸ್‌ ಇನ್ಸ್‌ಪೆಕ್ಟರ್‌ ನಂಜುಂಡೇಗೌಡ, ಮೆರ್ಸಸ್‌ ಮುತ್ತೂಟ್‌ ಫಿನ್‌ ಕಾಪ್‌ರ್‍ ಲಿಮಿಟೆಡ್‌ನ ರಾಜಾಜಿನಗರ ಶಾಖೆಯಿಂದ ಒಟ್ಟು 4,426 ಗ್ರಾಂ ತೂಕದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದರು. 2012ರ ಮಾ.26ರಂದು ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಚಿನ್ನಾಭರಣಗಳನ್ನು ಹಾಜರುಪಡಿಸಿ, ಅವುಗಳನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಅನುಮತಿ ಪಡೆದಿದ್ದರು.

ಮುತ್ತೂಟ್‌ ಕಂಪನಿ 2011ರ ಸೆ.5ರಂದು ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ನಂಜುಂಡೇಗೌಡ ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಜಯಕುಮಾರ್‌ ಹಾಗೂ ಮೇಘರಾಜ್‌ ಎಂಬುವವರು ಸಾಲ ಪಡೆಯಲು ಖಾತರಿಯಾಗಿ ತಮ್ಮಲ್ಲಿ ಅಡಮಾನ ಇಟ್ಟಿದ್ದಾರೆ. ಹೀಗಾಗಿ ಅವುಗಳನ್ನು ತಮ್ಮ ಸುಪರ್ದಿಗೆ ಒಪ್ಪಿಸಲು ಕೋರಿದ್ದರು. ಅದಕ್ಕೆ ಆಕ್ಷೇಪಿದ್ದ ನಂಜುಂಡೇಗೌಡ, ತನಿಖೆಗೆ ಅಗತ್ಯವಿರುವ ಕಾರಣ ಮುತ್ತೂಟ್‌ ಕಂಪನಿಗೆ ಚಿನ್ನಾಭರಣ ನೀಡಬಾರದು ಎಂದು ಕೋರಿದ್ದರು. ಇದರಿಂದ ಕೋರ್ಟ್‌ ಆ ಅರ್ಜಿಯನ್ನು ವಜಾಗೊಳಿಸಿತ್ತು.

ಕಳ್ಳನ ಪತ್ನಿಯಿಂದ ಅರ್ಜಿ:

ನಂತರ 2012ರ ಫೆ.13ರಂದು ಪ್ರಕರಣದ ಮೊದಲನೇ ಆರೋಪಿ ಜಯಕುಮಾರ್‌ನ ಪತ್ನಿ ಎನ್ನಲಾದ ಹೆಪ್‌ಝಿಬಾ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಂಜುಂಡೇಗೌಡ ಚಿನ್ನಾಭರಣಗಳನ್ನು ತಮ್ಮಿಂದ ವಶಪಡಿಸಿಕೊಂಡಿದ್ದು, ಅವುಗಳನ್ನು ಹಿಂದಿರುಗಿಸುವಂತೆ ಕೋರಿದ್ದರು. ಆ ಅರ್ಜಿಗೆ ಮಾತ್ರ ನಂಜುಂಡೇಗೌಡ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಹೀಗಾಗಿ, ಮ್ಯಾಜಿಸ್ಪ್ರೇಟ್‌ ಕೋರ್ಟ್‌, .30 ಲಕ್ಷ ಮೌಲ್ಯದ ಒಟ್ಟು 32 ಚಿನ್ನಾಭರಣಗಳನ್ನು ಹೆಪ್‌ಝಿಬಾ ವಶಕ್ಕೆ ನೀಡಲು ನಂಜುಂಡೇಗೌಡಗೆ ಆದೇಶಿಸಿತ್ತು.

ಈ ವಿಚಾರ ತಿಳಿದ ಮುತ್ತೂಟ್‌ ಕಂಪನಿ ಮ್ಯಾಜಿಸ್ಟೆ್ರಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿ, ಹೆಪ್‌ಝಿಬಾ ಪಡೆದುಕೊಂಡ ಚಿನ್ನಾಭರಣಗಳೆಲ್ಲವನ್ನೂ ಹಿಂಪಡೆಯುವಂತೆ ಕೋರಿತ್ತು. ಅಷ್ಟೊತ್ತಿಗಾಗಲೇ ಹೆಫ್‌ಝಿಬಾ ವಶಕ್ಕೆ ಚಿನ್ನಾಭರಣ ನೀಡಿದ್ದರಿಂದ ಮುತ್ತೂಟ್‌ ಕಂಪನಿಯ ಅರ್ಜಿಯನ್ನು ಕೋರ್ಟ್‌ ತಿರಸ್ಕರಿತ್ತು. ಇದರಿಂದ ಮುತ್ತೂಟ್‌ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಮುತ್ತೂಟ್‌ಗೆ ಆಕ್ಷೇಪ:

ಮುತ್ತೂಟ್‌ ಕಂಪನಿಗೆ ಚಿನ್ನಾಭರಣ ನೀಡಲು ಆಕ್ಷೇಪಿಸಿದ್ದ ಇನ್ಸ್‌ಪೆಕ್ಟರ್‌ ನಂಜುಂಡೇಗೌಡ, ಹೆಪ್‌ಝಿಬಾ ಸುಪರ್ದಿಗೆ ನೀಡಲು ಮಾತ್ರ ಆಕ್ಷೇಪಿಸಿರಲಿಲ್ಲ. ಈ ಅಂಶವು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿಗೆ ಅನುಮಾನ ಮೂಡಿಸಿತ್ತು. ಇದರಿಂದ ನಂಜುಂಡೇಗೌಡ, ಜಯಕುಮಾರ್‌, ಹೆಪ್‌ಝಿಬಾ, ಚಿನ್ನಾಭರಣ ಬಿಡುಗಡೆಗೆ ಆದೇಶಿಸಿದ ವೇಳೆ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ಸರ್ಕಾರಿ ಅಭಿಯೋಜಕರಾಗಿದ್ದ ಕಮಲಾ ಅವರನ್ನು ವಿಚಾರಣೆಗೆ ಕರೆಯಿಸಲಾಯಿತು. ಹೆಪ್‌ಝಿಬಾ ಚಿನ್ನಾಭರಣ ಬಿಡುಗಡೆ ಕೋರಿದ್ದ ಅರ್ಜಿ ತಮಗೆ ಒದಗಿಸಿರಲಿಲ್ಲ ಎಂದು ಕಮಲಾ ಅವರು ನುಡಿದರೆ, ಹೆಪ್‌ಝಿಬಾ ಅರ್ಜಿಗೆ ವರದಿ ಸಲ್ಲಿಸಲು ಕೋರ್ಟ್‌ ನೀಡಿದ್ದ ಆದೇಶ ತೋರಿಸಲು ಇನ್ಸ್‌ಪೆಕ್ಟರ್‌ ವಿಫಲವಾದರು. ಇದರಿಂದ ಪ್ರಕರಣ ಬಯಲಾಯಿತು.

ಕೋರ್ಟ್‌ ಅನ್ನೇ ದಾರಿ ತಪ್ಪಿಸಿದ ಕಳ್ಳನ ಪತ್ನಿ!

ಹೆಪ್‌ಝಿಬಾ 2012 ಫೆ.13ರಂದು ಅರ್ಜಿ ಸಲ್ಲಿಸಿದ್ದರು. ಅದನ್ನು ಮಾ.26ರಂದು ವಿಚಾರಣೆಗೆ ತೆಗೆದುಕೊಳ್ಳಲಾಗಿತ್ತು. ಆದರೆ, ಅಂದು ಆ ಅರ್ಜಿ ವಿಚಾರಣೆಗೆ ನಿಗದಿಯಾಗಿರಲಿಲ್ಲ. ಹೆಪ್‌ಝಿಬಾ ಪರ ವಕೀಲರು, ಅರ್ಜಿ ವಿಚಾರಣೆ ನಡೆಸಲು ಕೋರಿದ ಕಾರಣ ಸರ್ಕಾರಿ ಅಭಿಯೋಜಕರಿಗೆ ನೋಟಿಸ್‌ ನೀಡದೇ ಅರ್ಜಿ ವಿಚಾರಣೆ ನಡೆಸಲಾಗಿತ್ತು. ಆಗ ತನಿಖಾಧಿಕಾರಿ ಸಹ ಸರ್ಕಾರಿ ಅಭಿಯೋಜಕರಿಗೆ ಗಮನಕ್ಕೆ ತರದೇ, ಹೆಪ್‌ಝಿಬಾ ವಶಕ್ಕೆ ಚಿನ್ನಾಭರಣಗಳನ್ನು ನೀಡಲು ಯಾವುದೇ ಆಕ್ಷೇಪಣೆ ಇಲ್ಲ ಎಂದು ವರದಿ ನೀಡಿದ್ದರು. ಅದೇ ದಿನ ಚಿನ್ನಾಭರಣ ಬಿಡುಗಡೆಗೂ ಕೋರ್ಟ್‌ನಿಂದ ಅನುಮತಿಯೂ ಪಡೆದಿದ್ದರು. ಹೀಗಾಗಿ ಹೆಪಝಿಬಾ ಅಣತಿಯಂತೆ, ಇನ್ಸ್‌ಪೆಕ್ಟರ್‌ ನಂಜುಂಡೇಗೌಡ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಯಾವುದೇ ಆಕ್ಷೇಪಣೆ ಸಲ್ಲಿಸಲಿಲ್ಲ. ಹೆಪ್‌ಝಿಬಾ ತನಿಖಾಧಿಕಾರಿ ತಮ್ಮಿಂದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಇದು ‘ಸ್ಟೇಜ್‌ ಮ್ಯಾನೇಜ್‌ ಆಗಿದ್ದು, ನಂಜುಂಡೇಗೌಡ ಹಾಗೂ ಹೆಪ್‌ಝಿಬಾ ವಂಚಿಸಿದ್ದಾರೆ. ಆ ಕುರಿತು ತನಿಖೆ ನಡೆಸುವುದು ಅಗತ್ಯವಿದೆ’ ಎಂದು ಆದೇಶದಲ್ಲಿ ನ್ಯಾಯಪೀಠ ಹೇಳಿದೆ.