ಸೈಬರ್ ಸೆಕ್ಯುರಿಟಿ ತಜ್ಞರು ಆ ರೀತಿ ಕ್ಯಾಮೆರಾ ಕಡೆ ವಿಜಯ ಸಂಕೇತವನ್ನು ತೋರಿಸುವ ಅಭ್ಯಾಸವನ್ನು ಕೂಡಲೇ ನಿಲ್ಲಿಸುವಂತೆ ಎಚ್ಚರಿಸುತ್ತಾರೆ. ಆ ರೀತಿಯ ಫೋಟೋಗಳಿಂದ ಹ್ಯಾಕರ್ಸ್ ಸುಲಭವಾಗಿ ವ್ಯಕ್ತಿಯ ಬೆರಳಚ್ಚುಗಳನ್ನು ಕದಿಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿಯವರಿಗೆ ಚುನಾವಣಾ ರ್ಯಾಲಿಯನ್ನುದ್ದೇಶಿಸುವಾಗ, ಮತದಾನ ಮಾಡಿದ ಬಳಿಕ ಅಥವಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಜನರತ್ತ ನಗುವನ್ನು ಬೀರಿ ತಮ್ಮ ಕೈಯಿಂದ ವಿಜಯ ಸಂಕೇತ ತೋರಿಸುವ ಅಭ್ಯಾಸವಿದೆ. ಆದರೆ ಆ ಆಭ್ಯಾಸವನ್ನು ಅವರು ಬಿಟ್ಟು ಬಿಡಬೇಕೆಂದು ಸೈಬರ್ ಸೆಕ್ಯುರಿಟಿ ತಜ್ಞರ ಸಲಹೆಯಾಗಿದೆಯೆಂದು ಫ್ಯಾಕ್ಟರ್ ಡೈಲಿ ವರದಿ ಮಾಡಿದೆ.

ಈ ಅಭ್ಯಾಸ ಕೇವಲ ಪ್ರಧಾನಿ ಮೋದಿಯವರಲ್ಲದೇ, ಇನ್ನಿತರ ರಾಜಕಾರಣಿಗಳು, ಕ್ರೀಡಾಪಟುಗಳು ಹಾಗೂ ಸಿನೆಮಾ ತಾರೆಯರು ಕೂಡಾ ಫೋಟೋಗೆ ಪೋಸ್ ನೀಡುವಾಗ ಈ ರೀತಿ V ಸಂಕೇತವನ್ನು ಪ್ರದರ್ಶಿಸುತ್ತಾರೆ.

ಆದರೆ ಸೈಬರ್ ಸೆಕ್ಯುರಿಟಿ ತಜ್ಞರು ಆ ರೀತಿ ಕ್ಯಾಮೆರಾ ಕಡೆ ವಿಜಯ ಸಂಕೇತವನ್ನು ತೋರಿಸುವ ಅಭ್ಯಾಸವನ್ನು ಕೂಡಲೇ ನಿಲ್ಲಿಸುವಂತೆ ಎಚ್ಚರಿಸುತ್ತಾರೆ. ಆ ರೀತಿಯ ಫೋಟೋಗಳಿಂದ ಹ್ಯಾಕರ್ಸ್ ಸುಲಭವಾಗಿ ವ್ಯಕ್ತಿಯ ಬೆರಳಚ್ಚುಗಳನ್ನು ಕದಿಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಷಯ ಮೇಲ್ನೋಟಕ್ಕೆ ಅಸಾಧ್ಯವೆಂದೂ ಅನಿಸಿದರು ಸೈಬರ್ ಸೆಕ್ಯುರಿಟಿ ತಜ್ಞರು ಅದು ಸಾಧ್ಯವೆಂದು ಅಭಿಪ್ರಾಯಪಡುತ್ತಾರೆ. ಆಧುನಿಕ ಕ್ಯಾಮೆರಾಗಳನ್ನು ಬಳಸಿ ತೆಗೆದ ಹೈ ರೆಸೊಲ್ಯೂಶನ್ ಫೋಟೊಗಳಿಂದ ವ್ಯಕ್ತಿಯ ಬೆರಳಚ್ಚುಗಳನ್ನು ನಕಲು ಮಾಡಲು ಸಾಧ್ಯವಿದೆ ಎಂದು ಅವರು ಹೇಳುತ್ತಾರೆ.

ಲ್ಯುಸಿಡಿಯಸ್ ಎಂಬ ಸೈಬರ್ ಸೆಕ್ಯುರಿಟಿ ಕಂಪನಿಯ ಸಹ-ಸ್ಥಾಪಕ ರಾಹುಲ್ ತ್ಯಾಗಿ ಹೇಳುವ ಪ್ರಕಾರ ಫೋಟೊಗಳಿಂದ ಬೆರಳಚ್ಚುಗಳನ್ನು ನಕಲು ಮಾಡುವುದು ಸುಲಭ ಕೆಲಸ.

ಇಂಟರ್ನೆಟ್’ನಿಂದ ಹೈ ರೆಸಲ್ಯುಶಶನ್ ಇರುವ ಫೋಟೋ ಡೌನ್’ಲೋಡ್ ಮಾಡಿ, ಸಾಮಾನ್ಯವಾಗಿ ಫೋಟೋ ಎಡಿಟಿಂಗ್’ಗೆ ಬಳಸುವ ಫೋಟೋಶಾಪ್’ನಂತಹ ಸಾಫ್ಟ್’ವೇರ್ಗಳನ್ನು ಬಳಸಿ ಫೋಟೋವನ್ನು ಝೂಮ್ ಮಾಡಲಾಗುತ್ತದೆ. ಬಳಿಕ ಇಂಟರ್ನೆಟ್’ನಲ್ಲಿ ಮುಕ್ತವಾಗಿರುವ ಅಲ್ಗಾರಿತಮ್’ಗಳನ್ನು ಬಳಸಿ ಬೆರಳಚ್ಚುಗಳನ್ನು ನಕಲು ಮಾಡಬಹುದಾಗಿದೆ ಎಂದು ತ್ಯಾಗಿ ಹೇಳುತ್ತಾರೆ.

ಬಳಿಕ 3-D ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ಆ ಬೆರಳಚ್ಚುಗಳನ್ನು ಪಾಲಿ ಫಿಂಗರ್ (Poly Finger) ಮೇಲೆ ಮುದ್ರಿಸಬಹುದು. ಪಾಲಿ ಫಿಂಗರ್ ಎಂಬುವುದು ನೋಡಲು ಬೆರಳಿನಂತೆಯೇ ಕಾಣುವ ಹಾಗೂ ಸ್ಪರ್ಶಿಸುವಾಗ ಚರ್ಮ ಹಾಗೂ ನೈಜ ಬೆರಳಿನ ಅನುಭವ ನೀಡುವ ಕೃತಕ ವಸ್ತುವಾಗಿದೆ, ಎಂದು ತ್ಯಾಗಿ ಹೇಳುತ್ತಾರೆ.

ಸೆಂಟರ್ ಫಾರ್ ಐಡೆಂಟಿಫಿಕೆಶನ್ ಟೆಕ್ನಾಲಜಿ ರಿಸರ್ಚ್ (CITeR) ತಯಾರಿಸುವ ರಬ್ಬರ್ ಮೇಲಿನ ಬೆರಳಚ್ಚುಗಳಿಗೆ ಹ್ಯಾಂಕರ್’ಗಳು ಪಾಲಿ ಫೀಂಗರ್ ಎಂದೇ ಕರೆಯುತ್ತಾರೆ.

ಕ್ರಿಮಿನಲ್’ಗಳ ಕೈಗೆ ಸಿಕ್ಕಿದರೆ ಅಪಾಯ ತಪ್ಪಿದ್ದಲ್ಲ!

ಪೋಟೋಗಳಿಂದ ಬೆರಳಚ್ಚುಗಳನ್ನು ನಕಲು ಮಾಡಬಹುದಾಗಿದೆಯೆಂದು ಜಪಾನಿನ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸಂಸ್ಥೆಯು ಕೂಡಾ ಕಳೆದ ತಿಂಗಳು ಬಹಿರಂಗ ಪಡಿಸಿತ್ತು. ನಿರ್ದಿಷ್ಟ ದೂರದಿಂದ ಡಿಜಿಟಲ್ ಕ್ಯಾಮೆರಾ ಬಳಸಿ ತೆಗೆದ ಫೋಟೋಗಳಿಂದ ಬೆರಳಚ್ಚುಗಳನ್ನು ಪಡೆಯುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆಂದು ಅದು ಹೇಳಿತ್ತು.

ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆ ಅಪರಾಧಿಗಳು ಕೂಡಾ ಅಷ್ಟೇ ವೇಗದಲ್ಲಿ ಆಧುನಿಕ ತಂತ್ರಗಳನ್ನು ಬಳಸುತ್ತಿದ್ದಾರೆ. ಮಹತ್ವದ ಹುದ್ದೆಗಳನ್ನು ಅಲಂಕರಿಸಿದವರ ಬೆರಳಚ್ಚುಗಳು ನಕಲಿಯಾದವೆಂದಾದಲ್ಲಿ ದೊಡ್ಡ ಅನಾಹುತವೇ ನಡೆಯುವುದರಲ್ಲಿ ಸಂಶಯವಿಲ್ಲ.

ಯುರೋಪಿನ ಹಳೆಯ ಹ್ಯಾಕರ್ಸ್’ಗಳೆಂದು ಪ್ರಸಿದ್ಧವಾಗಿರುವ ಕ್ಯಾವೋಸ್ ಕಂಪ್ಯೂಟರ್’ನ ಜಾನ್ ಕ್ರಿಸ್ಲರ್ ಎಂಬ ಹ್ಯಾಕರ್ 2014ರಲ್ಲಿ ಜರ್ಮನಿಯ ರಕ್ಷಣಾ ಸಚಿವರ ಬೆರಳಚ್ಚುಗಳನ್ನು ನಕಲು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಿಶಿಗನ್ ಪೊಲೀಸರು ಕಳೆದ ವರ್ಷ ಕೊಲೆಯಾದ ವ್ಯಕ್ತಿಯೊಬ್ಬನ ಫೋನನ್ನು ಅನ್’ಲಾಕ್ ಮಾಡಲು ಆತನ ಬೆರಳಚ್ಚುಗಳನ್ನು 3-D ಪ್ರಿಂಟ್ ಮಾಡಿರುವುದು ಸುದ್ದಿಯಾಗಿತ್ತು.