ರಾಜ್ಯ ಬಿಜೆಪಿ ಘಟಕವು ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಮೇ 18 ರಿಂದ ರಾಜ್ಯದ ಬರ ಪರಿಸ್ಥಿತಿ ಅರಿಯಲು ಪ್ರವಾಸ ಕೈಗೊಳ್ಳುತ್ತಿದೆ. ಇದಕ್ಕೂ ಮೊದಲು ವಿಧಾನಪರಿಷತ್ ವಿರೋಧಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಬರ ಅಧ್ಯಯನ ಪ್ರವಾಸ ಕೈಗೊಳ್ಳುತ್ತಾರೆ. ಇದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ದೊಡ್ಡಬಳ್ಳಾಪುರ (ಮೇ.15): ರಾಜ್ಯ ಬಿಜೆಪಿ ಘಟಕವು ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಮೇ 18 ರಿಂದ ರಾಜ್ಯದ ಬರ ಪರಿಸ್ಥಿತಿ ಅರಿಯಲು ಪ್ರವಾಸ ಕೈಗೊಳ್ಳುತ್ತಿದೆ. ಇದಕ್ಕೂ ಮೊದಲು ವಿಧಾನಪರಿಷತ್ ವಿರೋಧಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಬರ ಅಧ್ಯಯನ ಪ್ರವಾಸ ಕೈಗೊಳ್ಳುತ್ತಾರೆ. ಇದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ತಂಡದೊಂದಿಗೆ ಬಿಜೆಪಿಯ ಎಲ್ಲ ರಾಜ್ಯ ಮುಖಂಡರು ಬರ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದೇವೆ. ಇದಕ್ಕೂ ಮುನ್ನ ಈಶ್ವರಪ್ಪ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ. ಈಶ್ವರಪ್ಪಗೂ, ನನಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಅವರು- ನಾನು ಒಟ್ಟಿಗೆ ಇದ್ದೇವೆ. ಇದೆಲ್ಲ ಮಾಧ್ಯಮಗಳ ಸೃಷ್ಟಿ ಅಷ್ಟೆ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ತಾಲೂಕು ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ಶತಮಾನೋತ್ಸವ ಅಂಗವಾಗಿ ನಡೆಯುತ್ತಿರುವ ರಾಜ್ಯ ಗ್ರಾಮೀಣ ಕ್ರೀಡಾ ಉತ್ಸವ-ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನೆಗಾಗಿ ಆಗಮಿಸಿದ್ದ ಬಿಎಸ್‌ವೈ, ದೊಡ್ಡಬಳ್ಳಾಪುರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದರು. ಮೆರವಣಿಗೆಗೆ ಬಿಜೆಪಿ ಕಾರ್ಯಕರ್ತರ ಬೈಕ್ ರ‌್ಯಾಲಿ ಸಾಥ್ ನೀಡಿತ್ತು. ಪಂದ್ಯಾವಳಿ ಉದ್ಘಾಟನೆಗೂ ಮುನ್ನ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಗಣ್ಯರು ವೇದಿಕೆ ಏರುತ್ತಲೆ ಗಾಳಿ ಸಹಿತ ಭಾರಿ ಮಳೆ ಆರ್ಭಟಿಸಿತು. ಪರಿಣಾಮ ಸಾರ್ವಜನಿಕರು ದಿಕ್ಕಾಪಾಲಾಗಿ ಮರಗಳ ಕೆಳಗಡೆ ಆಶ್ರಯ ಹುಡುಕಿದರು. ಕೆಲವರು ಚೇರುಗಳನ್ನು ತಲೆ ಮೇಲೆ ಇಟ್ಟು ಮಳೆಯಿಂದ ರಕ್ಷಣೆ ಪಡೆಯುತ್ತಿದ್ದ ದೃಶ್ಯಗಳು ಕಂಡು ಬಂದವು.