ಇತ್ತೀಚೆಗೆ 25 ಕೆಜಿ ಬದಲು 26 ಕೆಜಿ ಅಕ್ಕಿ ಮೂಟೆಗಳ ಮಾರಾಟ ಹೆಚ್ಚಾಗಿದೆ. ಇದಕ್ಕೆ ಜಿಎಸ್ಟಿ ಮತ್ತು ಪ್ಯಾಕೇಜಿಂಗ್ ನಿಯಮಗಳಿಂದ ತಪ್ಪಿಸಿಕೊಳ್ಳಲು ವ್ಯಾಪಾರಿಗಳು ಕಂಡುಕೊಂಡಿರುವ ಮಾರ್ಗವೇ ಕಾರಣ ಎನ್ನಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ನಷ್ಟವಿಲ್ಲದಿದ್ದರೂ, ತೆರಿಗೆ ವಿನಾಯಿತಿಯ ಲಾಭ ವ್ಯಾಪಾರಿಗಳಿಗೆ ಸಿಗುತ್ತಿದೆ.
ಸಾಮಾನ್ಯವಾಗಿ ಅಕ್ಕಿ ಖರೀದಿ ಮಾಡುವ ಸಂದರ್ಭದಲ್ಲಿ 25 ಕೆಜಿಯ ಮೂಟೆಗಳು ಹೆಚ್ಚಾಗಿ ಕಾಣುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಅಕ್ಕಿ ಮೂಟೆಯ ತೂಕ 26ಕೆಜಿ ಮೂಟೆಯ ಮಾರಾಟ ಹೆಚ್ಚಾಗಿದೆ. ಹಾಗಾದರೆ ಮೂಟೆಯ ತೂಕವನ್ನು ಒಂದು ಕೆಜಿ ಹೆಚ್ಚು ಮಾಡಲು ಕಾರಣವೇನು? ಹೆಚ್ಚುವರಿಯಾಗಿ ಒಂದು ಕಿಲೋ ಹೆಚ್ಚಾಗಿ ಮಾರಾಟ ಮಾಡಿದರೆ ವ್ಯಾಪಾರಿಗಳಿಗೆ ಏನೆಲ್ಲಾ ಪ್ರಯೋಜನ ಆಗುತ್ತದೆ? ಜಿಎಸ್ಟಿಯಿಂದ ತಪ್ಪಿಸಿಕೊಳ್ಳಲು ಈ ಮಾರ್ಗವನ್ನು ಬಳಸುತ್ತಿದ್ದಾರಾ? ಎಂಬ ಪ್ರಶ್ನೆಗಳು ಹಲವರಿಗೆ ಎದುರಾಗಿದೆ.
ಅಕ್ಕಿ ಮೂಟೆಗಳನ್ನು 25 ಕೆಜಿಯ ಬದಲಾಗಿ, 26 ಕೆಜಿ ತೂಕದ ಮೂಟೆಗಳನ್ನು ಮಾರಾಟ ಮಾಡಲು ಜಿಎಸ್ಟಿ ಮತ್ತು ಪ್ಯಾಕೇಜ್ ಮೇಲಿನ ನಿರ್ಬಂದಗಳು ಕಾರಣ ಎಂಬ ಚರ್ಚೆ ಜೋರಾಗಿದೆ. 2022ರಲ್ಲಿ ಪ್ಯಾಕ್ ಮಾಡಿ ಲೆಬಲ್ ಮಾಡಿದ ಆಹಾರ ಧಾನ್ಯಗಳ ಮೇಲೆ ಶೇಕಡಾ 5ರಷ್ಟು ಜಿಎಸ್ಟಿ ವಿಧಿಸಲು ಆರಂಭಿಸಿರುವುದೇ ಇದಕ್ಕೆ ಕಾರಣವಂತೆ. ವ್ಯಾಪಾರಿಗಳು ಜಿಎಸ್ಟಿ ತಪ್ಪಿಸಿಕೊಳ್ಳಲು ಮೂಟೆಗಳ ತೂಕವನ್ನು ಹೆಚ್ಚು ಮಾಡಿದ್ದಾರೆ.
ಇದರ ಹಿಂದೆ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ (ಜಿಎಸ್ಟಿ), ಪ್ಯಾಕೇಜಿಂಗ್ಗೆ ಸಂಬಂಧಿಸಿದ ನಿರ್ಬಂಧಗಳೇ ಕಾರಣವಾಗುತ್ತಿದೆ. 2022ರಲ್ಲಿ ಜುಲೈನಲ್ಲಿ ಕೇಂದ್ರ ಸರ್ಕಾರ ಪ್ಯಾಕ್ ಮಾಡಿ, ಲೆಬಲ್ ಮಾಡಿದ ಆಹಾರ ಧಾನ್ಯಗಳ ಮೇಲೆ ಶೇಕಡಾ 5ರಷ್ಟು ಜಿಎಸ್ಟಿ ಜಾರಿ ಮಾಡಿತ್ತು. ಇದಕ್ಕೂ ಮುನ್ನ ಬ್ರಾಂಡೆಡ್, ಪ್ರೀ ಪ್ಯಾಕೇಜ್ ಆಹಾರ ಪದಾರ್ಥಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಮೇಲೆ ಬದಲಾವಣೆ ಆಯ್ತು. ಇದರ ಪ್ರಭಾವ ಅಕ್ಕಿ ಮಾರಾಟ ಮೇಲೂ ಕೂಡ ಆಯ್ತು. ನಿರ್ದಿಷ್ಟ ನಿರ್ಬಂಧಗಳಿಗೆ ಅನುಗುಣವಾಗಿ ಮೊದಲೇ ಪ್ಯಾಕ್ ಮಾಡಿದ ಮತ್ತು ಲೆಬಲ್ ಹಾಕಿದ ಅಕ್ಕಿ ಮೇಲೂ ತೆರಿಗೆ ಜಾರಿ ಆಗಿತ್ತು. ಇದರೊಂದಿಗೆ ಅಕ್ಕಿ ಮಿಲ್ ಮಾಲೀಕರು ಮತ್ತು ವ್ಯಾಪಾರಿಗಳು ಪ್ಯಾಕೇಜ್ ತೂಕವನ್ನು 25 ರಿಂದ 16 ಕೆಜಿಗೆ ಹೆಚ್ಚಿಸಿದ್ದರು. ಇದರೊಂದಿಗೆ ತೆರಿಗೆ ಭಾರ ಕೂಡ ಕಡಿಮೆಯಾಗಿತ್ತು.
ನಮ್ಮ ದೇಶದಲ್ಲಿ 2011ರ ಕಾನೂನು ಮಾಪನಶಾಸ್ತ್ರ ನಿಯಮಗಳ ಅನ್ವಯ, 25 ಕೆಜಿಗಿಂತ ಹೆಚ್ಚಿನ ತೂಕದ ಪ್ಯಾಕೇಜ್ಗಳ ಮೇಲೆ ಚಿಲ್ಲರೆ ಪ್ಯಾಕೇಜ್ಗಳಿಗೆ ಅನ್ವಹಿಸುವ ಕೆಲವು ನಿಯಮಗಳಿಂದ ವಿನಾಯತಿ ನೀಡಲಾಗಿದೆ. ಇದರಂತೆ ಕೆಲವು ರೈಸ್ ಮಿಲ್ ಮಾಲೀಕರು 25 ಕೆಜಿ ಬದಲಿಗೆ 26 ಕೆಜಿ ತೂಕದ ಮೂಟೆ ಮಾರಾಟ ಮಾಡಲು ಮುಂದಾಗಿದ್ದಾರೆ. ಇದರಿಂದ ನೀವು 26 ಕೆಜಿ ಅಕ್ಕಿ ಮಾರಾಟ ಮಾಡಿದರೂ, 25 ಕೆಜಿಯ ಮೂಟೆಗೆ ನೀಡುವ ಶೇಕಡಾ 5ರಷ್ಟು ತೆರಿಗೆ ಮಾತ್ರ ನೀಡಲಾಗುತ್ತದೆ. ಇದರಿಂದ ಉಳಿದ ಒಂದು ಕೆಜಿಗೆ ಯಾವುದೇ ಜಿಎಸ್ಟಿ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ದೇಶದಲ್ಲಿ ಮೊದಲು ತಮಿಳುನಾಡಿನ ತಿರುಪ್ಪೂರು ರೈಸ್ ಮಿಲ್ ಮಾಲೀಕರು ಈ ಉಪಾಯವನ್ನು ಕಂಡುಕೊಂಡಿದ್ದರು. ಆ ಬಳಿಕ ಇದು ದೇಶದಾದ್ಯಂತ ಹೆಚ್ಚಾಯ್ತು ಎಂದು ಹೇಳಲಾಗಿದೆ.
ಇದು ನಿಯಮಗಳ ಉಲ್ಲಂಘನೆ ಆಗೋದಿಲ್ವಾ?
ಅಕ್ಕಿ ಚೀಲದ ತೂಕವನ್ನು 25 ಕೆಜಿಯಿಂದ 26ಕೆಜಿಗೆ ಹೆಚ್ಚಿಗೆ ಮಾಡಿ ಮಾರಾಟ ಮಾಡುವುದು ಕಾನೂನು ಬಾಹಿರ ಆಗೋದಿಲ್ಲ. ಇಲ್ಲಿ ಪ್ಯಾಕೇಜ್ ಮಾಡಿದ ಸರಕುಗಳ ನಿಯಮಗಳಲ್ಲಿ ಇರುವ ಕೆಲವು ವಿನಾಯಿತಿಗಳು ಹಾಗೂ ಜಿಎಸ್ಟಿ ಕಾಯ್ದೆಯಲ್ಲಿರುವ ಕೆಲವು ನಿರ್ಬಂಧನೆಗಳು ಬೇರೆ ಬೇರೆ ಆಗಿದೆ. ಇದರಿಂದ ಒಂದು ಕೆಜಿ ಹೆಚ್ಚು ಮಾಡಿದರೂ ಯಾವುದೇ ಬದಲಾವಣೆ ಆಗೋದಿಲ್ಲ. ಆದ್ದರಿಂದ ತಜ್ಞರು ಜಿಎಸ್ಟಿ ಸಂದರ್ಭದಲ್ಲಿಯೂ ತೆರಿಗೆ ವಿಧಿಸಲು ಕಾನೂನಿನ ಬದಲಾವಣೆ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದರಿಂದ ಗ್ರಾಹಕರಿಗೆ ನಷ್ಟ ಆಗುತ್ತಾ?
25 ಕೆಜಿ ಮೂಟೆಯ ಬದಲಿಗೆ 26 ಕೆಜಿ ಅಕ್ಕಿ ಮಾರಾಟ ಗ್ರಾಹಕರಿಗೂ ಲಾಭವನ್ನು ನೀಡುತ್ತದೆ. ತೂಕ ಹೆಚ್ಚಾದ ಮಾತ್ರಕ್ಕೆ ಇದಕ್ಕೆ ವ್ಯಾಪಾರಿಗಳು ಹೆಚ್ಚಿನ ಬೆಲೆ ನಮೂಡಿಸುವುದಿಲ್ಲ. ಅಥವಾ ಚೀಲದ ತೂಕ ಹೆಚ್ಚಾದರೂ ಕಡಿಮೆ ಹಣ ತೆಗೆದುಕೊಳ್ಳುತ್ತಾರೆ ಎಂದು ಅರ್ಥವಲ್ಲ. ಗ್ರಾಹಕರಿಗೆ ವ್ಯಾಪಾರಿಗಳು ಮೂಟೆಗೆ ಬೆಲೆ ನಿಗದಿ ಮಾಡುವ ಬದಲಿಗೆ ಕೆಜಿ ಅಕ್ಕಿಗೆ ಎಷ್ಟು ಎಂದು ಬೆಲೆ ಮೇಲೆ ಮಾರಾಟ ಮಾಡುತ್ತಾರೆ. ಉದಾಹರಣೆಗೆ 25 ಕೆಜಿ ಅಕ್ಕಿ ಮೂಟೆ 1250 ರೂಪಾಯಿ ದರವಿದ್ದರೆ, 26 ಕೆಜಿ ಮೂಟೆಯನ್ನು 1,300 ರೂಪಾಯಿಗೆ ಮಾರಾಟ ಮಾಡುತ್ತಾರೆ. ಇದರಿಂದ ಗ್ರಾಹಕರಿಗೆ ದರದಲ್ಲಿ ಯಾವುದೇ ನಷ್ಟ ಆಗೋದಿಲ್ಲ. ಒಂದೊಮ್ಮೆ ಗ್ರಾಹಕರಿಗೆ 26 ಕೆಜಿ ಅಕ್ಕಿ ಮೂಟೆಯನ್ನು 1250 ರೂಪಾಯಿಗೆ ಮಾರಾಟ ಮಾಡಿದರೆ ಲಾಭ ಸಿಗುತ್ತದೆ.














