ಹಾಸನ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಹಾಸನಾಂಬೆ ದರ್ಶನ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ. ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಇಲ್ಲಿನ ಅಭಿವೃದ್ಧಿ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾಸನ: ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದ್ದರು. ವರ್ಷಗಳ ಬಳಿಕ ಹಾಸನಕ್ಕೆ ಬಂದಿದ್ದ ಅವರು, ದೇವಿ ದರ್ಶನ ಪಡೆದುಕೊಂಡಿದ್ದಾರೆ. ಈ ವೇಳೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ದೇವಿಯ ದರ್ಶನ ಪಡೆದುಕೊಂಡಿದ್ದು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಭೇಟಿ

ಬಹಳ ವರ್ಷಗಳ ಬಳಿಕ ನಾನು ಹಾಸನಕ್ಕೆ ಬಂದಿದ್ದೇನೆ. ಚೆನ್ನಾಗಿ ಅನಿಸುತ್ತಿದೆ. ಇಲ್ಲಿ ಸುಮಾರು ಬೆಳವಣಿಗೆ ಹಾಗೂ ಬದಲಾವಣೆಗಳು ಆಗಿದೆ. ಬಹಳ ಸಂತಸ ತಂದಿದೆ ಎಂದು ಹೇಳಿದರು. ಅಲ್ಲದೇ, ಹಾಸನಾಂಬೆ ದೇವಿಯೂ ವೈಷ್ಣೋದೇವಿ ಅಮ್ಮನ ರೂಪದಲ್ಲಿಯೇ ಭಕ್ತರಿಗೆ ದರ್ಶನ ನೀಡುತ್ತಾಳೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಬಹಳ ಮಂದಿಗೆ ತಲುಪುತ್ತಿದೆ. ಇದಕ್ಕೆ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಹಾಗೂ ಭಕ್ತರಿಗೆ ಧನ್ಯವಾದ ಹೇಳಬೇಕು. ಇದರಿಂದ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

ದೇವಿಯ ಮೇಲೆ ನಂಬಿಕೆ ಇಟ್ಟು ದೇವಾಲಯಕ್ಕೆ ಭಕ್ತರು ಬರುತ್ತಿರುವುದು ಬಹಳ ಸಂತಸದ ಸಂಗತಿ. ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಆದಾಯವೂ ಹೆಚ್ಚಾಗಿದೆ. ಆದಾಯ ಹೆಚ್ಚಾದಂತೆ ಭಕ್ತರಿಗೆ ನೀಡುವ ಸೌಲಭ್ಯಗಳು ಕೂಡ ಹೆಚ್ಚಾಗುತ್ತದೆ. ಪ್ರತಿ ವರ್ಷ ಇಲ್ಲಿ ಅಭಿವೃದ್ಧಿಯಾಗುತ್ತಿದೆ. ಇದನ್ನು ನೋಡಿದರೆ ಚೆನ್ನಾಗಿ ಅನಿಸುತ್ತಿದೆ. ಇಲ್ಲಿಗೆ ಬರುವುದು ಕೂಡ ಸಂತಸ ತರುತ್ತದೆ ಎಂದು ರೋಹಿಣಿ ಹೇಳಿದ್ದಾರೆ.

ಹಾಸನಾಂಬೆ ದೇವಿಯ ದರ್ಶನಕ್ಕೆ ಪ್ರತಿವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದನ್ನು ಕಂಡು ಸಂತೋಷವಾಗಿದೆ. ನನ್ನ ಅವಧಿಯಲ್ಲಿ ಭಕ್ತರಿಗೆ ದಿನದ 24 ಗಂಟೆಯೂ ನಿರಂತರ ದರ್ಶನದ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ದರ್ಶನೋತ್ಸವದ ಅವಧಿಯನ್ನೂ ವಿಸ್ತರಿಸುವಂತೆ ಸರ್ಕಾರದ ಗಮನಕ್ಕೆ ಮನವಿ ಮಾಡಿದ್ದೇನೆ ಎಂದರು. ಈ ಹಿಂದೆ ಅರ್ಚಕರೊಂದಿಗೆ ಚರ್ಚಿಸಿದಾಗ ದಿನದ 24 ಗಂಟೆಯೂ ದರ್ಶನ ಕಲ್ಪಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದರು. ಪ್ರತಿವರ್ಷ ದರ್ಶನೋತ್ಸವದ ಅವಧಿ ಮತ್ತು ಇಂದಿನ ಭಕ್ತರ ಸಂಖ್ಯೆಯನ್ನು ಹೋಲಿಸಿದರೆ ಈ ಬಾರಿ ಭಕ್ತರ ಆಗಮನ ಗಣನೀಯವಾಗಿ ಹೆಚ್ಚಾಗಿದೆ.

ಹಾಸನಾಂಬೆ ದೇವಿಯ ದರ್ಶನ ಪಡೆಯಲು ವಿವಿಧ ಭಾಗಗಳಿಂದ ಜನರು ಆಗಮಿಸುತ್ತಿರುವುದು ವಿಶೇಷವಾಗಿದೆ. ಇಂತಹ ಧಾರ್ಮಿಕ ಉತ್ಸವಗಳು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಉತ್ತಮ ಅವಕಾಶ ಒದಗಿಸುತ್ತವೆ ಎಂದರು. ಹಾಸನ ಜಿಲ್ಲೆಯಲ್ಲಿರುವ ಗ್ರಾಮೀಣ ಪ್ರವಾಸಿ ತಾಣಗಳತ್ತಲೂ ಹೆಚ್ಚಿನ ಗಮನಹರಿಸಬೇಕು. ಹಾಸನಾಂಬೆ ಜಾತತ್ರೆಯ ಸಂದರ್ಭದಲ್ಲಿ 11ರಿಂದ 14 ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಿಂದ ಜನರು ಜಿಲ್ಲೆಗೆ ಆಗಮಿಸುವುದರಿಂದ, ಈ ಅವಧಿಯಲ್ಲಿ ಗ್ರಾಮೀಣ ಪ್ರವಾಸಿ ತಾಣಗಳ ಪರಿಚಯ, ಪ್ರವಾಸೋದ್ಯಮ ಚಟುವಟಿಕೆಗಳು ಹಾಗೂ ಸ್ಥಳೀಯ ಆಕರ್ಷಣೆಗಳನ್ನು ಉತ್ತೇಜಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.