Asianet Suvarna News Asianet Suvarna News

ಭಾರತದ ನೋಟುಗಳು ಜಗತ್ತಿನಲ್ಲೇ ಅತಿ ಕೊಳಕು, ಏಕೆ..?

ನಾವು ದಿನನಿತ್ಯ ಬಳಸುವ ಕರೆನ್ಸಿ ನೋಟುಗಳು ವಿವಿಧ ಸೋಂಕು ಹರಡುತ್ತವೆ ಮತ್ತು ಮಾರಣಾಂತಿಕ ರೋಗಗಳಿಗೆ ಕಾರಣವಾಗುತ್ತಿವೆ ಎಂಬ ಸಂಶೋಧನಾ ವರದಿಯನ್ನು ಇಂಡಿಯನ್ ಇನ್ಸ್
ಟಿಟ್ಯೂಟ್ ಆಫ್ ಜಿನಾಮಿಕ್ಸ್ ಅಂಡ್ ಇಂಟಿಗ್ರೇಟೆಡ್ ಬಯಲೋಜಿಯಾ ಸಂಸ್ಥೆ ನೀಡಿದೆ. ಯಾವ ಅಂತಸ್ತು, ಅಸಮಾನತೆ ಇಲ್ಲದೆ ಎಲ್ಲರ ಕೈಯಿಂದ, ಎಲ್ಲ ಸ್ಥಳಗಳಿಂದ ಚಲಾವಣೆಯಾಗುತ್ತ ನಡೆಯುವ ಈ ಧನಲಕ್ಷ್ಮೀ ಎಂಬ ಕರೆನ್ಸಿ ನೋಟುಗಳು ತಮ್ಮ ಮೈತುಂಬ ರೋಗಾಣುಗಳ ಕೊಳೆಯನ್ನು ಮೆತ್ತಿಕೊಂಡು ಸಂಚರಿಸುತ್ತಿವೆ ಎಂದರೆ ನೋಟುಗಳನ್ನು ಮುಟ್ಟಲು ಭಯವಾಗುತ್ತದೆ

why are indian currency notes dirty and unhygienic
Author
Bengaluru, First Published Sep 6, 2018, 12:48 PM IST

ಬೆಂಗಳೂರು[ಸೆ.06]: ನಾವು ದಿನನಿತ್ಯ ಬಳಸುವ ಕರೆನ್ಸಿ ನೋಟುಗಳು ವಿವಿಧ ಸೋಂಕು ಹರಡುತ್ತವೆ ಮತ್ತು ಮಾರಣಾಂತಿಕ ರೋಗಗಳಿಗೆ ಕಾರಣವಾಗುತ್ತಿವೆ ಎಂಬ ಸಂಶೋಧನಾ ವರದಿಯನ್ನು ಇಂಡಿಯನ್ ಇನ್ಸ್’ಟಿಟ್ಯೂಟ್ ಆಫ್ ಜಿನಾಮಿಕ್ಸ್ ಅಂಡ್ ಇಂಟಿಗ್ರೇಟೆಡ್ ಬಯಲೋಜಿಯಾ ಸಂಸ್ಥೆ ನೀಡಿದೆ. ಯಾವ ಅಂತಸ್ತು, ಅಸಮಾನತೆ ಇಲ್ಲದೆ ಎಲ್ಲರ ಕೈಯಿಂದ, ಎಲ್ಲ ಸ್ಥಳಗಳಿಂದ ಚಲಾವಣೆಯಾಗುತ್ತ ನಡೆಯುವ ಈ ಧನಲಕ್ಷ್ಮೀ ಎಂಬ ಕರೆನ್ಸಿ ನೋಟುಗಳು ತಮ್ಮ ಮೈತುಂಬ ರೋಗಾಣುಗಳ ಕೊಳೆಯನ್ನು ಮೆತ್ತಿಕೊಂಡು ಸಂಚರಿಸುತ್ತಿವೆ ಎಂದರೆ ನೋಟುಗಳನ್ನು ಮುಟ್ಟಲು ಭಯವಾಗುತ್ತದೆ.

ಹಣ ಸಾರ್ವಜನಿಕರ ಸೊತ್ತು. ಇಂತಹ ನೋಟುಗಳು ಎಷ್ಟು ಜನರ ಕೈಯಿಂದ, ಯಾವ ಜನರ ಕೈಯಿಂದ ಹಾದು ಬಂದಿವೆ ಎಂದು ಹೇಳುವುದು ಅಸಾಧ್ಯ. ಕಕ್ಕಸ ತೊಳೆಯುವವರ ಕೈಯಿಂದ ನೇರವಾಗಿ ಅದು ನಮ್ಮ ತಟ್ಟೆಗೆ ಇಡ್ಲಿ ವಡಾ ಹಾಕುವ ಮಾಣಿಯ ಕೈಗೂ ಬರಬಹುದು. ಪೇ ಆ್ಯಂಡ್ ಯೂಸ್ ಮೂತ್ರಾಲಯದ ಡಬ್ಬಿಯಿಂದ ದೇವಾಲಯದ ಹುಂಡಿಗೂ ಬಂದು ಬೀಳಬಹುದು.

ನಾವು ಹರಿದ, ಒದ್ದೆಯಾದ ನೋಟುಗಳನ್ನು ಇಟ್ಟುಕೊಂಡು ತಿರುಗಾಡುತ್ತಿರುತ್ತೇವೆ. ಅವುಗಳ ಮೈಗೆಲ್ಲ ಮೆತ್ತಿಕೊಂಡ ಬ್ಯಾಕ್ಟೀರಿಯಾಗಳು, ವೈರಸ್‌ಗಳು ಬೆಚ್ಚಗೆ ನಮ್ಮ ಕಿಸೆ, ಪರ್ಸ್‌ಗಳಲ್ಲಿ ಕುಳಿತು
ವೃದ್ಧಿಸುತ್ತಿರುತ್ತವೆ. ಕೈಯಿಂದ ಕೈಗೆ ಬದಲಾವಣೆಯಾಗುವಾಗ ಅಸಂಖ್ಯ ರೋಗಾಣುಗಳನ್ನು ಸಾಗಿಸುತ್ತವೆ. ಸಾರ್ಸ್, ಅಂಥ್ರಾಕ್ಸ್’ನಂಥ ವೈರಸ್‌ಗಳನ್ನು ದೇಶದಿಂದ ದೇಶಕ್ಕೆ ಸಾಗಿಸಿದ ಕುಖ್ಯಾತಿ
ನೋಟುಗಳಿಗೆ ಇದೆ. ಅಮೆರಿಕದಲ್ಲಿ ಶೇ.92ರಷ್ಟು ಕೊಳಕು ನೋಟುಗಳಿಂದ ಹೆಪಟೈಟಿಸ್ ಬಿ ಸೋಂಕು ಹರಡಲು ಸಾಧ್ಯವಿದೆಯಂತೆ. ವಾರ್ಷಿಕ ಸುಮಾರು 36 ಸಾವಿರ ಜನ ನೋಟುಗಳು ಹರಡುವ ಸಾಂಕ್ರಾಮಿಕ ಕಾಯಿಲೆಯಿಂದ ಸಾಯುತ್ತಾರಂತೆ! ಭಾರತದಲ್ಲಂತೂ ಶೇ.100ಕ್ಕೆ ನೂರರಷ್ಟು ನೋಟುಗಳು ಅಪಾಯಕಾರಿ ಸೋಂಕುಗಳನ್ನು ಹೊಂದಿವೆಯಂತೆ. ನೋಟುಗಳಿಂದಲೇ ಎಷ್ಟು ಜನ ಸತ್ತಿದ್ದಾರೆ ಎಂಬ ಲೆಕ್ಕ ಇನ್ನೂ ಸಿಕ್ಕಿಲ್ಲ.

ನೋಟಿನಿಂದ ಬರಬಹುದು ಈ ರೋಗ
ಮಣಿಪಾಲ ವಿವಿಯ ಕಸ್ತೂರಬಾ ಮೆಡಿಕಲ್ ಕಾಲೇಜು ನಡೆಸಿದ ಸಂಶೋಧನೆಯ ಪ್ರಕಾರ ದೇಶದ ಸಂಪೂರ್ಣ ನೋಟುಗಳು ಹಾಗೂ ಶೇ.96ರಷ್ಟು ನಾಣ್ಯಗಳು ಅತ್ಯಂತ ಅಪಾಯಕಾರಿಯಾದ
ಸ್ಟೆಫೆಲೋಕೊಕಸ್ ಅರ್ಯೋಯಸ್, ಕ್ಲೆಬಿಸಿಯಲ್ ಎಸ್ಪಿಪಿ ಹಾಗೂ ಎಸ್ಚೆರಿಚಿಯಾ ಕೋಲಿಯಂಥ ಸೂಕ್ಷ್ಮಾಣು ಜೀವಿಗಳನ್ನು ಹೊಂದಿವೆ. ಇವುಗಳಿಂದ ಕ್ಷಯ, ಮಿದುಳು ರೋಗ, ಮೂತ್ರನಾಳದ ಸೋಂಕು, ಶ್ವಾಸಕೋಶ, ಕರುಳು ಹಾಗೂ ಚರ್ಮ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂದು ಅದು ಹೇಳಿದೆ. ಕೊಳಕು ನೋಟನ್ನು ಹಿಡಿದ ಮೇಲೆ ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳದೆ ಮೂಗನ್ನು ಹಿಡಿದುಕೊಳ್ಳುವುದು, ಉಗುಳನ್ನು ಹಚ್ಚಿ ನೋಟುಗಳನ್ನು ಎಣಿಸುವುದು, ಕಣ್ಣನ್ನು ಉಜ್ಜಿಕೊಳ್ಳುವುದು ಹಾಗೂ ಆಹಾರ ಸೇವನೆ ಮಾಡುವುದರಿಂದ ಟಿಬಿ, ನ್ಯೂಮೋನಿಯಾ, ಜೀರ್ಣಾಂಗದ ಅಲ್ಸರ್, ಕರಳು ಬೇನೆ ಹಾಗೂ ವಾಂತಿ ಭೇದಿಯಂತಹ ಸಾಂಕ್ರಾಮಿಕ ರೋಗಗಳು ಬರಬಲ್ಲವು.

ಭಾರತೀಯ ರಿಸರ್ವ್ ಬ್ಯಾಂಕ್ 500 ಹಾಗೂ 1000 ರು. ನೋಟುಗಳನ್ನು ರದ್ದುಗೊಳಿಸಿದ್ದು, ಒಂದು ರೀತಿ ಹಳೆಯ ಕೊಳಕು ನೋಟುಗಳಿಗೆ ಮುಕ್ತಿಕೊಟ್ಟಂತಾಗಿದೆ. ಆದರೆ, ಅವುಗಳ ಬದಲಿಗೆ
ಹೊಸತಾಗಿ ಬಂದ ನೋಟುಗಳೂ ಕಾಗದದ ನೋಟುಗಳೇ. ಪಾಲಿಮರ್ ನೋಟು ತಂದಿದ್ದರೆ ಅವು ಬೇಗ ಹಾಳಾಗುತ್ತಿರಲಿಲ್ಲ. 10, 20, 50 ಹಾಗೂ 100ರ ಹಳೆಯ ನೋಟುಗಳೂ ಜನರ ನಿತ್ಯದ
ಬಳಕೆಯಿಂದ ಗಬ್ಬೆದ್ದುಹೋಗಿವೆ. ಇನ್ನು, 1, 2 ಹಾಗೂ 5ರ ನೋಟುಗಳು ಬ್ಯಾಂಕಿನ ಮುಖವನ್ನೇ ನೋಡುವುದಿಲ್ಲ. 

ಕೊಳಕು ನೋಟಿಗೆ ಪರಿಹಾರವೇನು?
ಕೊಳಕು ನೋಟುಗಳು ಬ್ಯಾಂಕ್‌ನ ಕೌಂಟರ್‌ಗೆ ಬಂದಾಗ ಅವುಗಳನ್ನು ಶುಚಿಗೊಳಿಸುವ ಕೆಲಸವನ್ನು ಮಾಡಬೇಕು. ಆದರೆ, ನಮ್ಮಲ್ಲಿ ಮಾಡುತ್ತಿಲ್ಲ. ಕೆಲ ಎಟಿಎಮ್‌ಗಳು ನೋಟುಗಳನ್ನು ಬಿಸಿ ಮಾಡುವ ಮೂಲಕ ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಹಾಗೂ ಮುರುಟಿದ ನೋಟುಗಳನ್ನು ಖಡಕ್ ಮಾಡುವ ತಂತ್ರಜ್ಞಾನವನ್ನು ಹೊಂದಿವೆ. ಅವುಗಳನ್ನು ಎಲ್ಲೆಡೆ ಅಳವಡಿಸಬೇಕು. ನೋಟು ಬಳಕೆಯ ಬದಲಾಗಿ ಪೇಟಿಎಂ, ತೇಜ್, ಭೀಮ್, ಆನ್’ಲೈನ್ ಮನಿ ಟ್ರಾನ್ಸ್‌ಫರ್, ಡೆಬಿಟ್ ಕ್ರೆಡಿಟ್ ಕಾರ್ಡ್ ಮುಂತಾದ ನಗದುರಹಿತ ವ್ಯವಹಾರ ಮಾಡುವ ಮೂಲಕ ಕೊಳಕು ನೋಟುಗಳಿಂದ ರಕ್ಷಣೆ ಪಡೆಯಬಹುದು.

ಬೇರೆ ದೇಶಗಳಲ್ಲಿ ಏನು ಮಾಡ್ತಾರೆ?
ಜಪಾನಿನ ಹಿಟ್ಯಾಚಿ ಕಂಪನಿಯು ನೂರಕ್ಕೆ ನೂರರಷ್ಟು ನೋಟು ಗಳನ್ನು ಶುಚಿಗೊಳಿಸುವ ಎಟಿಎಮ್ ಯಂತ್ರಗಳನ್ನು ತಯಾರಿಸಿದೆ. ಹೀಗಾಗಿ ಜಾಪನೀಸ್ ಯೆನ್ ಜಗತ್ತಿನ ಅತ್ಯಂತ ಶುಚಿಯಾದ ನೋಟು ಎಂದು ಖ್ಯಾತಿ ಗಳಿಸಿದೆ. ಆಸ್ಟ್ರೇಲಿಯಾದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಕರೆನ್ಸಿ ನೋಟುಗಳನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಪತ್ತೆಯಾಗುವ ಕೆಟ್ಟ ನೋಟುಗಳನ್ನು ಹಿಂಪಡೆದು ಹೊಸ ನೋಟುಗಳನ್ನು ಜಾರಿಗೆ ತರುತ್ತಾರೆ. ಅಲ್ಲದೆ ಇದರಿಂದ ಖೊಟ್ಟಿ ನೋಟುಗಳ ಚಲಾವಣೆಯನ್ನು ತಪ್ಪಿಸಬಹುದು. ಇಂತಹ ಉಪಕ್ರಮವನ್ನು ಭಾರತದಲ್ಲೂ ತರಬೇಕಾಗಿದೆ. 10, 20, 50 ಹಾಗೂ 100ರ ಖೋಟಾ ನೋಟುಗಳು ಸಹ ಚಲಾವಣೆಯಲ್ಲಿವೆ. ಅಲ್ಲದೆ ನಾಣ್ಯಗಳನ್ನು ಕದ್ದು ಬ್ಲೇಡುಗಳನ್ನು ತಯಾರಿಸಲಾಗುತ್ತಿದೆ. ಇಂತಹವುಗಳಿಗೂ ಇದರಿಂದ ಕಡಿವಾಣ ಬೀಳುತ್ತದೆ. 

ಭಾರತದ ರುಪಾಯಿ ಇತಿಹಾಸ 
ಭಾರತೀಯರು ಕ್ರಿ.ಪೂ.6ನೇ ಶತಮಾನದಲ್ಲೇ ಕಲ್ಲಿನ ನಾಣ್ಯಗಳನ್ನು ಬಳಸುತ್ತಿದ್ದರು. ನಂತರ ಬಂದ ಅರಸರು ಕಬ್ಬಿಣದ, ಚಿನ್ನದ, ಬೆಳ್ಳಿಯ ಹಾಗೂ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದರು. ಕುಶಾನರ ದೊರೆ ಕನಿಷ್ಕ ಭಾರತದ ನಾಣ್ಯ ಇತಿಹಾಸದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದನಲ್ಲದೇ ಚಿನ್ನದ ನಾಣ್ಯವನ್ನು ಮೊದಲಿಗೆ ಜಾರಿಗೆ ತಂದಿದ್ದ. ಮೊಹಮ್ಮದ್ ಬಿನ್ ತುಘಲಕ್ (1325-1350) ಚರ್ಮದ ನಾಣ್ಯವನ್ನು ಜಾರಿಗೆ ತಂದಿದ್ದ. ಶೇರ್‌ಷಹಾ ಸೂರಿ (1486-1545) ಧಾಮ್ ಎಂಬ ತಾಮ್ರದ ನಾಣ್ಯ ಜಾರಿಗೆ ತಂದಿದ್ದ. 18ನೇ ಶತಮಾನದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಾರನ್ ಹೇಸ್ಟಿಂಗ್ ಕಾಗದದ ನೋಟು (ಕ್ರೋನ್)ಗಳನ್ನು ಜಾರಿಗೆ ತಂದ. 1950ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅವುಗಳಿಗೆ ಭಾರತೀಯ ರೂಪವನ್ನು ಕೊಟ್ಟಿತು. ಹೀಗೆ ಭಾರತದ ನೋಟು ಜಗತ್ತಿನ ಎಲ್ಲ ನೋಟು ಮತ್ತು ನಾಣ್ಯಗಳಿಗಿಂತ ವಿಶಿಷ್ಟವಾದ ಇತಿಹಾಸವನ್ನು ಹೊಂದಿದೆ. ಆದರೆ ಇಂದು ಭಾರತದ ನೋಟುಗಳು ಜಗತ್ತಿನ ಅತ್ಯಂತ ಕೊಳಕು ನೋಟುಗಳು ಎಂಬ ಹಣೆಪಟ್ಟಿ ಹಚ್ಚಿಕೊಂಡಿವೆ. ಅವುಗಳನ್ನೇ ನಾವು ಲಕ್ಷ್ಮಿಯೆಂದು ಹಣೆಗೆ ಒತ್ತಿಕೊಳ್ಳುತ್ತೇವೆ!

ಲೇಖನ: ಡಾ. ಮಲ್ಲಿಕರ್ಜುನ ಗುಮ್ಮಗೋಳ
ಕೃಪೆ: ಕನ್ನಡಪ್ರಭ

Follow Us:
Download App:
  • android
  • ios