ಅಮಿತ್ ಶಾ ಹಾಗೂ ಅಹಮದ್ ಪಟೇಲ್ ನಡುವಿನ ಜಿದ್ದಾಜಿದ್ದಿನಿಂದ ರಾಷ್ಟ್ರದ ಗಮನ ಸೆಳೆದಿರುವ ಗುಜರಾತ್‌ನಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಇವತ್ತು ಮತದಾನ ನಡೆಯಲಿದೆ. ಅಮಿತ್ ಶಾ ಲೆಕ್ಕಾಚಾರ ವರ್ಕೌಟ್ ಆಗುತ್ತಾ ಅಥವಾ ಅಹಮದ್ ಪಟೇಲ್ ರಾಜ್ಯಸಭೆ ಪ್ರವೇಶಿಸುವವರೋ ಎಂಬುದು ನಿರ್ಧಾರವಾಗಲಿದೆ.

ಅಹಮದಾಬಾದ್(ಆ.08): ಅಮಿತ್ ಶಾ ಹಾಗೂ ಅಹಮದ್ ಪಟೇಲ್ ನಡುವಿನ ಜಿದ್ದಾಜಿದ್ದಿನಿಂದ ರಾಷ್ಟ್ರದ ಗಮನ ಸೆಳೆದಿರುವ ಗುಜರಾತ್‌ನಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಇವತ್ತು ಮತದಾನ ನಡೆಯಲಿದೆ. ಅಮಿತ್ ಶಾ ಲೆಕ್ಕಾಚಾರ ವರ್ಕೌಟ್ ಆಗುತ್ತಾ ಅಥವಾ ಅಹಮದ್ ಪಟೇಲ್ ರಾಜ್ಯಸಭೆ ಪ್ರವೇಶಿಸುವವರೋ ಎಂಬುದು ನಿರ್ಧಾರವಾಗಲಿದೆ.

ವರ್ಕೌಟ್​ ಆಗುತ್ತಾ ಅಮಿತ್​ ಶಾ ಲೆಕ್ಕಾಚಾರ?: ಕಾಂಗ್ರೆಸ್ ಅಭ್ಯರ್ಥಿ ಅಹಮದ್ ಪಟೇಲ್ ಗೆಲ್ತಾರಾ..?

ಗುಜರಾತ್​'ನಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಇವತ್ತು ಮತದಾನ ನಡೆಯಲಿದೆ. 182 ಸದಸ್ಯ ಬಲದ ವಿಧಾನಸಭೆಯಲ್ಲಿ 121 ಸ್ಥಾನ ಹೊಂದಿರುವ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಪೈಕಿ ಎರಡು ಸ್ಥಾನಗಳು ಸುಲಭವಾಗಿ ಬಿಜೆಪಿ ತೆಕ್ಕೆಗೆ ಬೀಳಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಇನ್ನು ಮತ್ತೊಂದು ಸ್ಥಾನಕ್ಕೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಅಹಮದ್​ ಪಟೇಲ್​ ಮತ್ತು ಬಿಜೆಪಿಯ ಅಭ್ಯರ್ಥಿಯಾಗಿ ಬಲವಂತಸಿಂಗ್​ ರಜಪೂತ್​ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

ಆದರೆ ಮೂರನೇ ಸ್ಥಾನಕ್ಕಾಗಿ ನಡೆದಿರುವ ಜಿದ್ದಾಜಿದ್ದಿ ರಾಷ್ಟ್ರಮಟ್ಟದ ಗಮನ ಸೆಳೆದಿದ್ದು, ಅಹಮದ್​ ಪಟೇಲ್​ ಮತ್ತು ಅಮಿತ್​ ಶಾ ನಡುವೆ ಫೈಟ್​ ಏರ್ಪಟ್ಟಿದೆ. ಹೇಗಾದರೂ ಮಾಡಿ ಅಹಮದ್​ ಪಟೇಲ್​ ರಾಜ್ಯಸಭಾ ಪ್ರವೇಶ ತಡೆಯಲು ಅಮಿತ್ ಶಾ ಎಲ್ಲಾ ರಾಜಕೀಯ ತಂತ್ರಗಳನ್ನು ಪ್ರಯೋಗಿಸಿದ್ದಾರೆ. ಇತ್ತ ಕಮಲ ಆಪರೇಷನ್ ಭೀತಿಯಿಂದ ಬೆಂಗಳೂರಿನ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ ಕಾಂಗ್ರೆಸ್ ಶಾಸಕರು ಗುಜರಾತ್‌ಗೆ ವಾಪಸ್ ಆಗಿದ್ದಾರೆ. ಅಹಮದಾಬಾದ್​ಗೆ ಮರಳಿರುವ ಕಾಂಗ್ರೆಸ್​ ಶಾಸಕರು ಇವತ್ತು ನೇರವಾಗಿ ಗಾಂಧಿ ನಗರಕ್ಕೆ ತೆರಳಿ ಮತ ಚಲಾಯಿಸಲಿದ್ದಾರೆ.

ಗೆಲ್ಲಲು 45 ಮತಗಳ ಅಗತ್ಯತೆ ಇದ್ದು, ಎರಡು ಸ್ಥಾನಗಳು ಸುಲಭವಾಗಿ ಬಿಜೆಪಿ ಪಾಲಾಗಲಿವೆ. ಅಹಮದ್ ಪಟೇಲ್​ ಗೆಲುವಿಗೆ ತನ್ನ ಬಳಿ ಅಗತ್ಯ ಮತ ಇದೆ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್​ ಎನ್​ಸಿಪಿ ಮತ್ತು ಜೆಡಿಯು ಮತಗಳನ್ನು ನಂಬಿಕೊಂಡಿದೆ. ಆದರೆ ಮೊದಲನೇ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳ ಮೂಲಕ ತನ್ನ ಮೂರನೇ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳುಹಿಸುವ ಲೆಕ್ಕಾಚಾರ ಹಾಕಿರುವ ಬಿಜೆಪಿ ಕೊನೆಯ ಕ್ಷಣದ ತಂತ್ರಗಾರಿಕೆಗೆ ಮೊರೆ ಹೋಗಿದೆ. ಇತ್ತ ಕಾಂಗ್ರೆಸ್​ ಅಹಮದ್​ ಪಟೇಲ್​ ಗೆಲುವಿನ ವಿಶ್ವಾಸದಲ್ಲಿದೆಯಾದರೂ ಅಡ್ಡ ಮತದಾನದ ಭೀತಿ ಇನ್ನಿಲ್ಲದೇ ಕಾಡುತ್ತಿದೆ.

ವರದಿ: ಕಿರಣ್​ ಹನಿಯಡ್ಕ, ಸುವರ್ಣ ನ್ಯೂಸ್​.