ಅಷ್ಟೇ ಅಲ್ಲ. ಉತ್ತರ ಕರ್ನಾಟಕ ಭಾಗಕ್ಕೇ ಅವಕಾಶ ನೀಡಬೇಕೆಂಬ ಮಾತು ಈಗಾಗಲೇ ಶುರವಾಗಿದೆ.
ಬೆಂಗಳೂರು(ಡಿ.14): ಸಚಿವರಾಗಿದ್ದ ಮೇಟಿ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಆ ಸ್ಥಾನಕ್ಕೆ ಯಾರು ಎನ್ನುವ ಮಾತುಗಳು ಆರಂಭವಾಗಿವೆ.
ಆದರೆ ರಾಜೀನಾಮೆಯಿಂದ ತೆರವಾಗಿರುವ ಈ ಸ್ಥಾನಕ್ಕೆ ಸದ್ಯಕ್ಕೆ ಯಾರನ್ನೂ ನೇಮಕ ಮಾಡುವ ಪ್ರಯತ್ನ ಸದ್ಯಕ್ಕೆ ನಡೆಯುವುದಿಲ್ಲ ಎನ್ನಲಾಗಿದೆ.
33 ಸಚಿವ ಸ್ಥಾನ ಭರ್ತಿ ನಂತರ ಉಳಿದಿದ್ದ ಒಂದು ಸ್ಥಾನಕ್ಕೆ ವಿಜಯನಗರದ ಎಂ.ಕೃಷ್ಣಪ್ಪ ಅವರಿಗೆ ನೀಡಿದ್ದಾಗಿತ್ತು. ಆದರೆ ಮೇಟಿ ಅವರ ರಾಜೀನಾಮೆಯಿಂದ ಮತ್ತೆ ಸಚಿವರ ಸಂಖ್ಯೆ 33ಕ್ಕೆ ಇಳಿದಿದೆ. ಹೀಗಾಗಿ ಆ ಒಂದು ಸ್ಥಾನಕ್ಕೆ ಯಾರು ಎನ್ನುವ ಚರ್ಚೆಗೆ ಚಾಲನೆ ಸಿಕ್ಕಿದೆ.
ಸಂಪುಟ ಪುನಾರಚನೆ ನಂತರ 12ಹೊಸ ಸಚಿವರೊಂದಿಗೆ ಹೊಸ ಇಮೇಜ್‌ನಲ್ಲಿ ಕೆಲಸ ಆರಂಭಿಸಿದ್ದ ಸಿದ್ದರಾಮಯ್ಯ ಅವರಿಗೆ ಮೇಟಿ ಪ್ರಕರಣ ಬೇಸರ ತಂದಿದ್ದು, ಇದರಿಂದ ಹೊರ ಬಂದ ನಂತರವಷ್ಟೇ ಅವರು ಈ ಬಗ್ಗೆ ಯೋಚಿಸಲಿದ್ದಾರೆ ಎಂದು ಆಪ್ತಮೂಲಗಳು ಹೇಳಿವೆ.
ಮೇಟಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಹಿಂದುಳಿದ ವರ್ಗದವರನ್ನೇ ತರಬೇಕಾಗುತ್ತದೆ. ಅದರಲ್ಲೂ ಕುರುಬ ಸಮುದಾಯದವರಿಗೇ ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಅಷ್ಟೇ ಅಲ್ಲ. ಉತ್ತರ ಕರ್ನಾಟಕ ಭಾಗಕ್ಕೇ ಅವಕಾಶ ನೀಡಬೇಕೆಂಬ ಮಾತು ಈಗಾಗಲೇ ಶುರವಾಗಿದೆ. ಅಂಥವರ ಪೈಕಿ ಬಾದಾಮಿ ಕ್ಷೇತ್ರದ ಬಿ.ಬಿ. ಚಿಮ್ಮನಕಟ್ಟಿ, ಕುಂದುಗೋಳ ಸಿ.ಎಸ್. ಶಿವಳ್ಳಿ, ಕೊಪ್ಪಳ ರಾಘವೇಂದ್ರ ಹಿಟ್ನಾಳ, ಮೈಸೂರಿನ ಎಂ.ಕೆ.ಸೋಮಶೇಖರ್, ಚಿತ್ರದುರ್ಗದ ಗೋವಿಂದಪ್ಪ, ಹೊಸಕೋಟೆಯ ಎಂ.ಟಿ.ಬಿ.ನಾಗರಾಜು ಇದ್ದಾರೆ.
ಇವರಲ್ಲಿ ಯಾರು ಆಕಾಂಕ್ಷಿಯಾಗಿ ಮುಂದೆ ಬರುತ್ತಾರೆ ಎನ್ನುವುದನ್ನು ನೋಡಬೇಕಿದೆ. ಅಷ್ಟಕ್ಕೂ ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಇನ್ನೂ ಇಬ್ಬರೂ ಸಚಿವರ ಸಿಡಿ ಎಂದು ಹೇಳಿರುವ ಹಿನ್ನೆಲೆಯಲ್ಲಿ ರಾಜಶೇಖರ್ ಹಿಂದೆ ಬೇರೆ ಶಕ್ತಿಗಳಿರುವ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನುಮಾನವಿದೆ. ಆದ್ದರಿಂದ ನಂಜನಗೂಡು ಉಪ ಚುನಾವಣೆ ವರೆಗೂ ಆ ಪ್ರಯತ್ನಕ್ಕೆ ಕೈ ಹಾಕುವುದು ಅನುಮಾನ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.
