ನೂತನ ಡಿಜಿಪಿ ಆಯ್ಕೆಗೆ ನಾಡಿದ್ದು ಮಹತ್ವದ ಸಭೆಸೇವಾ ಹಿರಿತನ ಪರಿಗಣಿಸಿದರೆ ನೀಲಮಣಿ ಎನ್.ರಾಜು ಅವರಿಗೆ ಡಿಜಿಪಿ ಹುದ್ದೆ ಹಾಲಿ ಡಿಜಿಪಿ ದತ್ತಾ ಅವರನ್ನೇ 3 ತಿಂಗಳು ಮುಂದುವರಿಸಬೇಕೆ ಎಂಬ ಚಿಂತನೆ

ಬೆಂಗಳೂರು: ನೂತನ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಆಯ್ಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅ.16ರಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.

ಹಾಲಿ ಡಿಜಿಪಿ ಆರ್.ಕೆ.ದತ್ತಾ ಅವರು ಅ.31ರಂದು ಸೇವಾ ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ನೂತನ ಡಿಜಿಪಿ ಆಯ್ಕೆ ಮಾಡಬೇಕಿದೆ. ಸೇವಾ ಹಿರಿತನ ಪರಿಗಣಿಸಿದರೆ ನೀಲಮಣಿ ಎನ್.ರಾಜು ಅವರಿಗೆ ಡಿಜಿಪಿ ಹುದ್ದೆ ದೊರಕಲಿದೆ. ನೀಲಮಣಿ ಅವರು ಡಿಜಿಪಿಯಾದರೆ ರಾಜ್ಯದ ಮೊದಲ ಮಹಿಳಾ ಡಿಜಿಪಿ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ಸೇವಾವಧಿ ಪರಿಗಣಿಸಿದರೆ ನೀಲಮಣಿ ನಂತರದ ಸ್ಥಾನದಲ್ಲಿ ಎಡಿಜಿಪಿಗಳಾದ ರೆಡ್ಡಿ ಹಾಗೂ ಸಿ.ಎಚ್.ಕಿಶೋರ್ ಚಂದ್ರ ಅವರಿದ್ದಾರೆ. ಆದರೆ ಸಕಾರಣ ವಿಲ್ಲದೇ ನೀಲಮಣಿ ಅವರನ್ನು ಅವಗಣನೆ ಮಾಡಲು ಸಾಧ್ಯವಿಲ್ಲ.

ಜತೆಗೆ ಉನ್ನತ ಹುದ್ದೆಗಳ ನೇಮಕಾತಿ ವೇಳೆ ಸೇವಾ ಹಿರಿತನವೇ ಮೊದಲ ಮಾನದಂಡ ಎಂಬುದಾಗಿ ಸುಪ್ರಿಂ ಕೋರ್ಟ್ ಕೆಲ ಪ್ರಕರಣಗಳಲ್ಲಿ ಆದೇಶ ನೀಡಿರುವುದರಿಂದ ರಾಜ್ಯ ಸರ್ಕಾರ ನೀಲಮಣಿ ಅವರನ್ನೇ ಆಯ್ಕೆ ಮಾಡಬೇಕಾಗುತ್ತದೆ.

ಆದಾಗ್ಯೂ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ರೆಡ್ಡಿ ಅಥವಾ ಕಿಶೋರ್ ಹೆಸರುಗಳನ್ನೂ ಸರ್ಕಾರ ಪರಿಶೀಲಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಹೊಸಬರನ್ನು ಮಾಡದೇ ಹಾಲಿ ಡಿಜಿಪಿ ದತ್ತಾ ಅವರನ್ನೇ 3 ತಿಂಗಳು ಮುಂದುವರಿಸಬೇಕೆ ಎಂಬ ಚಿಂತನೆಯೂ ನಡೆದಿದೆ.