2ನೇ ಡಿಸಿಎಂ ಇನ್ನೂ ಕಗ್ಗಂಟು

Who will Be Second DCM
Highlights

ಉಪ ಮುಖ್ಯಮಂತ್ರಿ ಹುದ್ದೆಗಾಗಿ ಪ್ರಬಲ ನಾಯಕರ ತೀವ್ರ ಪೈಪೋಟಿಯಿಂದ ಕಾಂಗ್ರೆಸ್‌ ಕಂಗೆಟ್ಟಿದೆ. ಹೈಕಮಾಂಡ್‌ ಮಟ್ಟದಲ್ಲಿ ಒಂದಕ್ಕಿಂತ ಹೆಚ್ಚು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಪ್ರಸ್ತಾಪವೇ ಇಲ್ಲ ಎಂದು ಕಾಂಗ್ರೆಸ್‌ ನಾಯಕತ್ವ ಸ್ಪಷ್ಟವಾಗಿ ಹೇಳುತ್ತಿದ್ದರೂ ವಿವಿಧ ಸಮುದಾಯಗಳ ನಾಯಕರು ತಮಗೆ ಈ ಬಾರಿ ಡಿಸಿಎಂ ಪಟ್ಟಬೇಕೇ ಬೇಕು ಎಂದು ಹಟ ತೊಟ್ಟಿದ್ದು, ಒತ್ತಡ ತಂತ್ರವನ್ನು ಮುಂದುವರೆಸಿದ್ದಾರೆ.

ಬೆಂಗಳೂರು : ಉಪ ಮುಖ್ಯಮಂತ್ರಿ ಹುದ್ದೆಗಾಗಿ ಪ್ರಬಲ ನಾಯಕರ ತೀವ್ರ ಪೈಪೋಟಿಯಿಂದ ಕಾಂಗ್ರೆಸ್‌ ಕಂಗೆಟ್ಟಿದೆ. ಹೈಕಮಾಂಡ್‌ ಮಟ್ಟದಲ್ಲಿ ಒಂದಕ್ಕಿಂತ ಹೆಚ್ಚು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಪ್ರಸ್ತಾಪವೇ ಇಲ್ಲ ಎಂದು ಕಾಂಗ್ರೆಸ್‌ ನಾಯಕತ್ವ ಸ್ಪಷ್ಟವಾಗಿ ಹೇಳುತ್ತಿದ್ದರೂ ವಿವಿಧ ಸಮುದಾಯಗಳ ನಾಯಕರು ತಮಗೆ ಈ ಬಾರಿ ಡಿಸಿಎಂ ಪಟ್ಟಬೇಕೇ ಬೇಕು ಎಂದು ಹಟ ತೊಟ್ಟಿದ್ದು, ಒತ್ತಡ ತಂತ್ರವನ್ನು ಮುಂದುವರೆಸಿದ್ದಾರೆ.

ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿರುವ ಪ್ರಮುಖ ನಾಯಕರು - ಡಿ.ಕೆ.ಶಿವಕುಮಾರ್‌, ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ ಮತ್ತು ಶಾಮನೂರು ಶಿವಶಂಕರಪ್ಪ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ

ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ ಹುದ್ದೆ ಬೇಕು ಎಂಬ ಅಧಿಕೃತ ಬೇಡಿಕೆ ಪಕ್ಷದ ಮುಂದೆ ಬಂದಿಲ್ಲ. ಆದರೆ, ಮಾಧ್ಯಮ ಹಾಗೂ ಸಮುದಾಯದ ಬಳಿ ಇಂತಹ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಎರಡನೇ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಬಗ್ಗೆ ಪಕ್ಷದಲ್ಲಿ ಚರ್ಚೆಯೇ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಉಪ ಮುಖ್ಯಮಂತ್ರಿ ಹುದ್ದೆಗೆ ಎಂ.ಬಿ.ಪಾಟೀಲ್‌, ಡಿ.ಕೆ.ಶಿವಕುಮಾರ್‌ರಂತಹ ನಾಯಕರು ಒತ್ತಡ ಹೇರುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಈ ಯಾವ ನಾಯಕರೂ ಎಂದೂ ನನ್ನ ಬಳಿಯಾಗಲೀ ಅಥವಾ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಬಳಿಯಾಗಲೀ ಈ ಬಗ್ಗೆ ಮಾತನಾಡಿಲ್ಲ. ಹೀಗಾಗಿ ಪಕ್ಷದಲ್ಲಿ ಇಂತಹ ಚರ್ಚೆ ನಡೆದಿಲ್ಲ ಎಂದರು.

ಆದರೆ, ಸಮುದಾಯದ ನಾಯಕರು ಮಾತ್ರ ಈ ಬಾರಿ ತಮಗೆ ಡಿಸಿಎಂ ಪದವಿ ಬೇಕೇ ಬೇಕು ಎಂಬ ಹಟ ಹಿಡಿದಿದ್ದು, ಸಮುದಾಯದ ನಾಯಕರೊಂದಿಗೆ ಸಭೆ ನಡೆಸುವ, ಸ್ವಾಮೀಜಿಗಳಿಂದ ಹೇಳಿಕೆ ಕೊಡಿಸುವ ಮೂಲಕ ಎರಡಕ್ಕಿಂತ ಹೆಚ್ಚು ಡಿಸಿಎಂ ಬೇಡಿಕೆಯನ್ನು ಜೀವಂತವಿಟ್ಟಿದ್ದಾರೆ. ಈ ಪೈಕಿ ಮುಂಚೂಣಿಯಲ್ಲಿ ಇರುವವರು ಡಿ.ಕೆ.ಶಿವಕುಮಾರ್‌. ಆಪರೇಷನ್‌ ಕಮಲಕ್ಕೆ ಸಿಲುಕದಂತೆ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೂ ಸೇರಿದಂತೆ ಪಕ್ಷ ಸೂಚಿಸಿದ ಎಲ್ಲಾ ಕೆಲಸಗಳನ್ನು ಮಾಡಿದ್ದರೂ ತಮಗೆ ಮನ್ನಣೆ ದೊರೆಯುತ್ತಿಲ್ಲ ಎಂಬ ಬೇಸರವನ್ನು ಅವರು ಪಕ್ಷದ ಮುಖಂಡರ ಮುಂದೆಯೇ ವ್ಯಕ್ತಪಡಿಸಿದ್ದು, ತಮಗೆ ಉಪ ಮುಖ್ಯಮಂತ್ರಿ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಆದರೆ, ಇದಕ್ಕೆ ಕಾಂಗ್ರೆಸ್‌ ನಾಯಕತ್ವ ಒಪ್ಪಿಲ್ಲ. ಹಾಗೆಯೇ ಶಿವಕುಮಾರ್‌ ಪಟ್ಟು ಬಿಟ್ಟಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹುದ್ದೆಯನ್ನು ಅವರಿಗೆ ನೀಡುವ ಚರ್ಚೆ ಆರಂಭವಾಗಿದೆ. ಶಿವಕುಮಾರ್‌ಗೆ ಕೆಪಿಸಿಸಿ ಹುದ್ದೆಯ ಜತೆಗೆ ಸಚಿವ ಸ್ಥಾನವನ್ನು ನೀಡಿದರೆ ಮಾತ್ರ ಅವರು ಸಾಮಾಧಾನಗೊಳ್ಳುವ ಸಾಧ್ಯತೆಯಿರುವುದರಿಂದ ಆ ಸಾಧ್ಯತೆಯ ಬಗ್ಗೆಯೂ ಪಕ್ಷದ ನಾಯಕತ್ವ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್‌ ಅವರು ಸತತವಾಗಿ ಡಿಸಿಎಂ ಹುದ್ದೆಗಾಗಿ ಪ್ರಯತ್ನ ನಡೆಸಿದ್ದಾರೆ. ತಮ್ಮ ಸಮುದಾಯದ ನಾಯಕರೊಂದಿಗೆ ಸಭೆಗಳನ್ನು ನಡೆಸಿ ಅವರ ಮೂಲಕ ನಾಯಕತ್ವದ ಮೇಲೆ ಒತ್ತಡ ನಿರ್ಮಾಣ ಮಾಡುತ್ತಿರುವ ಎಂ.ಬಿ.ಪಾಟೀಲ್‌, ಹೈಮಾಂಡ್‌ ಮಟ್ಟದಲ್ಲೂ ತೀವ್ರ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಇವರಲ್ಲದೆ, ನಾಯಕ ಸಮುದಾಯದ ಸತೀಶ್‌ ಜಾರಕಿಹೊಳಿ ಅವರು ಕೂಡ ಡಿಸಿಎಂ ಪದವಿಯ ಆಗ್ರಹವನ್ನು ನಾಯಕತ್ವದ ಮುಂದಿಟ್ಟಿದ್ದಾರೆ. ಒಂದಕ್ಕಿಂತ ಹೆಚ್ಚು ಡಿಸಿಎಂ ಸೃಷಿಸುವುದಾದರೆ ತಮಗೆ ಡಿಸಿಎಂ ಪದವಿ ಬೇಕು ಎಂಬುದು ಸತೀಶ್‌ ಜಾರಕಿಹೊಳಿ ಅವರ ಸ್ಪಷ್ಟನಿಲುವು. ನಾಯಕ ಸಮುದಾಯದ ಪ್ರಮುಖ ಮುಖಂಡರಾದ ಸತೀಶ್‌ ಅವರ ಬೇಡಿಕೆಯನ್ನು ಅಷ್ಟುಸುಲಭವಾಗಿ ಬದಿಗಿರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್‌ ಇಲ್ಲ. ಹೀಗಾಗಿ ಒಂದಕ್ಕಿಂತ ಹೆಚ್ಚು ಡಿಸಿಎಂ ಸೃಷ್ಟಿಸಿದರೆ ಸತೀಶ್‌ ಅವರ ಬೇಡಿಕೆ ಅಲಕ್ಷಿಸುವುದು ಕಷ್ಟ. ಹೀಗಾಗಿ ಡಿಸಿಎಂ ಹುದ್ದೆ ಸೃಷ್ಟಿಬಗ್ಗೆ ಕಾಂಗ್ರೆಸ್‌ ನಾಯಕತ್ವ ಗೊಂದಲದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಲಿಂಗಾಯತ ಸಮುದಾಯದಿಂದ ಡಿಸಿಎಂ ಹುದ್ದೆಯ ಮತ್ತೊಬ್ಬ ಪ್ರಮುಖ ಆಕಾಂಕ್ಷಿಯೆನಿಸಿದ ಶಾಮನೂರು ಶಿವಶಂಕರಪ್ಪ ಅವರು ಗುರುವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಪದ್ಮನಾಭನಗರದ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಇಬ್ಬರು ಹಿರಿಯ ನಾಯಕರ ನಡುವೆ ನಡೆದ ಈ ಮಾತುಕತೆ ಕಾಂಗ್ರೆಸ್‌ ವಲಯದಲ್ಲಿ ಕುತೂಹಲ ಮೂಡಿಸಿದೆ. ವೀರಶೈವ ಸಮುದಾಯದ ಪ್ರಮುಖ ನಾಯಕರಾದ ಶಿವಶಂಕರಪ್ಪ ಅವರು ಸಹ ಡಿಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದು, ಅವರ ಪರವಾಗಿ ಪ್ರಮುಖ ವೀರಶೈವ ಮಠಗಳು, ವೀರಶೈವ ಮಹಾಸಭಾ ಲಾಬಿ ನಡೆಸುತ್ತಿದೆ. ಈ ಹಂತದಲ್ಲಿ ಜೆಡಿಎಸ್‌ ವರಿಷ್ಠರೊಂದಿಗೆ ಶಾಮನೂರು ಶಿವಶಂಕರಪ್ಪ ಮಾತುಕತೆ ನಡೆಸಿರುವುದು ಕುತೂಹಲ ಹುಟ್ಟುಹಾಕಿದೆ.

ಉಪ ಮುಖ್ಯಮಂತ್ರಿ ಹುದ್ದೆ ಬೇಕು ಎಂಬ ಅಧಿಕೃತ ಬೇಡಿಕೆ ಪಕ್ಷದ ಮುಂದೆ ಬಂದಿಲ್ಲ. ಆದರೆ, ಮಾಧ್ಯಮ ಹಾಗೂ ಸಮುದಾಯದ ಬಳಿ ಇಂತಹ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಎರಡನೇ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಬಗ್ಗೆ ಪಕ್ಷದಲ್ಲಿ ಚರ್ಚೆಯೇ ಆಗಿಲ್ಲ.

- ಡಾ. ಜಿ.ಪರಮೇಶ್ವರ್‌, ಉಪಮುಖ್ಯಮಂತ್ರಿ-ಕೆಪಿಸಿಸಿ ಅಧ್ಯಕ್ಷ

loader