ನವದೆಹಲಿ, (ಮೇ.29): ಬಿಜೆಪಿ ಸಾರಥಿ, ಚಾಣಕ್ಯ ಅಂತನೇ ಹೆಸರು ವಾಸಿಯಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಾಳೆ (ಗುರುವಾರ) ಮೋದಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ.

ಹಿನ್ನೆಲೆಯಲ್ಲಿ ಮುಂದಿನ ಬಜೆಪಿ ಸಾರಥಿ ಯಾರು ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಕಮಲ ಪಡೆಯಲ್ಲಿದೆ. ಹಿನ್ನೆಲೆಯಲ್ಲಿ ಬಿಜೆಪಿ ಹೊಸ ಸಾರಥಿ ಯಾರು ಎನ್ನುವ ಕುತೂಹಲ ಕಾರ್ಯಕರ್ತರಲ್ಲಿ ಮೂಡಿಸಿದೆ.

ನರೇಂದ್ರ ಮೋದಿ ಹಾಗೂ ಅಮಿತ್ ಶಾ ಎನ್ನುವ ಬಿಜೆಪಿಯ ಜೋಡೆತ್ತುಗಳು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ದೇಶಾದ್ಯಂತ ಪ್ರಚಾರ ನಡೆಸಿ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಂಡಿವೆ.

ಕಳೆದ ಕೆಲವು ಮೂರು ವರ್ಷದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್‌ ಶಾ, ತಮ್ಮ ತಂತ್ರಗಾರಿಕೆಗಳಿಂದ ಇಡೀ ದೇಶದಲ್ಲಿ ಕಮಲ ಅರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

2014ರಲ್ಲಿ ರಾಜನಾಥ್‌ ಸಿಂಗ್‌ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದ ಬಳಿಕ ಅಮಿತ್‌ ಶಾ ಉತ್ತರದಾಯಿತ್ವ ತೆಗೆದುಕೊಂಡರು. ಅಲ್ಲಿಂದ ಇಲ್ಲಿಯವರೆಗೂ ಬಿಜೆಪಿಯ ಜೈತ್ರಯಾತ್ರೆ ಮುಂದುವರಿದಿದೆ. ಈ ಬಾರಿ ಅಮಿತ್‌ ಶಾ ಸಚಿವರಾಗುವುದು ಬಹುತೇಖ ಖಚಿವಾಗಿದೆ. ಇದರಿಂದ ಸಹಜವಾಗಿ ಅವರ ಬದಲು ಯಾರ ಎಂಬ ಪ್ರಶ್ನೆ ಉದ್ಭವವಾಗಿದೆ. 

ಬಿಜೆಪಿ ರಾಷ್ಟ್ರಾದ್ಯಕ್ಷ ಸ್ಥಾನಕ್ಕಾಗಿ ಜೆಪಿ ನಡ್ಡಾ, ನಿತಿನ್ ಗಡ್ಕರಿ ಹಾಗೂ ಧರ್ಮೇಂದ್ರ ಪ್ರಧಾನ್‌  ಹೆಸರರುಗಳು ಕೇಳಿ ಬರುತ್ತಿವೆ.  ಇವರಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. 

 ಈ ಮೂವರೂ ಮೋದಿ-ಷಾಗೆ ಆಪ್ತರಾಗಿರುವುದರಿಂದ ಅವರ ಸೂಚನೆ, ನಿರ್ದೇಶನಗಳಂತೆ ಕಾರ್ಯನಿರ್ವಹಿಸಬಲ್ಲರು. ಇದೇ ಕಾರಣಕ್ಕೆ ಈ ಮೂರು ಹೆಸರುಗಳು ಬಿಜೆಪಿ ಅಧ್ಯಕ್ಷ ಗಾದಿಗೆ ಬಲವಾಗಿ ಕೇಳಿ ಬರುತ್ತಿವೆ. 

ಅಂತೆಯೇ ಈ ಮೂವರನ್ನು ಹೊರತುಪಡಿಸಿ, ಊಹಿಸಲೂ ಸಾಧ್ಯವಾಗದ ವ್ಯಕ್ತಿಯೊಬ್ಬರಿಗೆ ಮಣೆ ಹಾಕಿದರೂ ಅಚ್ಚರಿ ಪಡಬೇಕಿಲ್ಲ.