ನನ್ನ ಸ್ಪರ್ಧೆ ಇಲ್ಲ, ಟಿ.ನರಸೀಪುರದಿಂದ ಪುತ್ರ ಸ್ಪರ್ಧೆ: ಮಹದೇವಪ್ಪ

First Published 20, Mar 2018, 8:15 AM IST
Who Is the Congress Candidate Of T Narasipura
Highlights

ನಾಲ್ಕು ದಶಕಗಳ ಕಾಲ ರಾಜಕೀಯ ಬದುಕು ನೀಡಿದ ಮೈಸೂರು ಜಿಲ್ಲೆಯ ಜನರನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಬೆಂಗಳೂರು ನಗರದ ಸಿ.ವಿ.ರಾಮನ್‌ ಕ್ಷೇತ್ರದಿಂದ ಸ್ಪರ್ಧಿಸುವ ಯಾವುದೇ ಇರಾದೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಹೇಳಿದರು.

ಟಿ.ನರಸೀಪುರ : ನಾಲ್ಕು ದಶಕಗಳ ಕಾಲ ರಾಜಕೀಯ ಬದುಕು ನೀಡಿದ ಮೈಸೂರು ಜಿಲ್ಲೆಯ ಜನರನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಬೆಂಗಳೂರು ನಗರದ ಸಿ.ವಿ.ರಾಮನ್‌ ಕ್ಷೇತ್ರದಿಂದ ಸ್ಪರ್ಧಿಸುವ ಯಾವುದೇ ಇರಾದೆ ಇಲ್ಲ. ಮುಂಬರುವ ಚುನಾವಣೆಯಲ್ಲಿ ಕಾರ್ಯಕರ್ತರ ಅಭಿಲಾಷೆ ಮತ್ತು ಮುಖಂಡರ ಒತ್ತಾಯದಂತೆ ಟಿ.ನರಸೀಪುರ ಕ್ಷೇತ್ರದಲ್ಲಿ ಪುತ್ರ ಸುನಿಲ್‌ ಬೋಸ್‌ ಸ್ಪರ್ಧೆಗೆ ಅವಕಾಶ ಕಲ್ಪಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಮಾತನಾಡಿ, ಹಾಸನ ಜಿಲ್ಲೆಯ ಮೀಸಲು ಕ್ಷೇತ್ರಗಳು ಸೇರಿ 16 ಪ್ರಮುಖ ಮೀಸಲು ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಲು ಆ ಭಾಗದ ಮುಖಂಡರು ಒತ್ತಡ ಹೇರುತ್ತಿದ್ದರಾದರೂ ಹಣವಿಲ್ಲದ ಸಂದರ್ಭದಲ್ಲಿ ಹಣ ಮತ್ತು ಅಧಿಕಾರ ಎರಡನ್ನೂ ನೀಡಿದ ಜಿಲ್ಲೆಯ ಜನರನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಹೀಗಾಗಿ ಸ್ಪರ್ಧೆಗೆ ಯಾವುದೇ ಕ್ಷೇತ್ರವನ್ನು ಇನ್ನೂ ಆಯ್ಕೆ ಮಾಡಿಕೊಂಡಿಲ್ಲ ಎಂದು ಸಚಿವ ಹೇಳಿದರು.

ಸ್ಪರ್ಧಿಸಬೇಕೆಂದೇನೂ ಇಲ್ಲ: ಮುಂದಿನ ಅವಧಿಗೂ ಕಾಂಗ್ರೆಸ್‌ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. ಮತ್ತೆ ಸಚಿವನಾಗಲು ಚುನಾವಣೆಯಲ್ಲಿ ಗೆಲ್ಲಲೆಬೇಕೆಂದೇನೂ ಇಲ್ಲ. ಮೇಲ್ಮನೆ ಸದಸ್ಯನಾಗಿ ಮತ್ತೆ ಸಚಿವನಾಗುತ್ತೇನೆ. ಪ್ರಸಕ್ತ ಚುನಾವಣೆಯಲ್ಲಿ ಸುನಿಲ್‌ ಬೋಸ್‌ ಅಭ್ಯರ್ಥಿಯಾಗಬೇಕೆಂದು ಕ್ಷೇತ್ರದ ಜನ ಅಪೇಕ್ಷೆಪಟ್ಟಿರುವುದರಿಂದ ನರಸೀಪುರದಲ್ಲಿ ಕಣಕ್ಕಿಳಿಯಲಿದ್ದಾನೆ.

ಆತನನ್ನು ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರು ಮತ್ತು ಮುಖಂಡರ ಮೇಲಿದೆ. ಚುನಾವಣೆಗೆ ಸ್ಪರ್ಧಿಸದಿರುವ ಕಾರಣ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರೊಟ್ಟಿಗೆ ದುಡಿಯುತ್ತೇನೆ. ಸಿಎಂ ಸಿದ್ದರಾಮಯ್ಯ ನಾಯಕತ್ವವನ್ನು ಬಲಪಡಿಸುತ್ತೇನೆ ಎಂದರು.

loader