ಎಚ್‌ಡಿಕೆಯೇ ಸಿಎಂ: ದೇವೇಗೌಡ ವಿಶ್ವಾಸಮುಂದಿನ ಬಾರಿ ನಮ್ಮಿಂದಲೇ ದಸರೆ ಉದ್ಘಾಟನೆ: ಸಿಎಂ ಸಿದ್ದರಾಮಯ್ಯನಾನೇ ಮುಂದಿನ ದಸರೆ ಉದ್ಘಾಟಿಸುವೆ: ಯಡಿಯೂರಪ್ಪ

ಎಚ್‌ಡಿಕೆಯೇ ಸಿಎಂ: ದೇವೇಗೌಡ ವಿಶ್ವಾಸ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು? ಯಾರು ಸಿಎಂ ಆಗಬೇಕು ಎಂಬುದನ್ನು ನಾಡಿನ ಜನರು ತೀರ್ಮಾನ ಮಾಡಲಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ. ಅಲ್ಲದೇ ಜೆಡಿಎಸ್ ಬಗ್ಗೆ ಜನರಿಗೆ ಅಪಾರ ಕಾಳಜಿ ಇದ್ದು, ಎಚ್. ಡಿ. ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗುವ ದೃಢ ವಿಶ್ವಾಸವಿದೆ ಎಂದಿದ್ದಾರೆ.

ಹಾಸನದ ಶ್ರವಣಬೆಳಗೊಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಾನೇ ದಸರಾ ಉದ್ಘಾಟಿಸಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನೀಡಿದ್ದ ಹೇಳಿಕೆಗೆ ಮಾಜಿ ಪ್ರಧಾನಿಗಳು, ನಾಡಿನ ಜನರು ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದನ್ನು ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಹಾಗೆ ಹೇಳುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ಯಾರಿಗೆ ಅಧಿಕಾರ ಎಂಬುದನ್ನು ತೀರ್ಮಾನ ಮಾಡೋರು ಜನ. ಚುನಾವಣೆ ಮುಗಿದ ಮೇಲೆ ಜನ ಏನು ತೀರ್ಪು ಕೊಡಲಿದ್ದಾರೆ ಎಂಬುದನ್ನು ಕಾದು ನೋಡೋಣ ಎಂದಷ್ಟೇ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್ ಮಾದರಿಯಲ್ಲಿ ಕಾಮ್ ಕಿ ಬಾತ್ ಕಾರ್ಯಕ್ರಮ ಮಾಡಲು ಹೊರಟಿರುವ ಸಿದ್ದರಾಯಯ್ಯ ನಡೆ ಕುರಿತು, ನಾಡಿನ ಮುಖ್ಯಮಂತ್ರಿಯೊಬ್ಬರು ಚುನಾವಣೆಯಲ್ಲಿ ಯಶ ಗಳಿಸಲು ಈ ರೀತಿಯ ಕಾರ್ಯಕ್ರಮಕ್ಕೆ ಮುಂದಾಗಿರುವುದು ಇದೇ ಮೊದಲು. ಮುಂದೆನಾಗುತ್ತೋ ನೋಡೋಣ ಎಂದಷ್ಟೇ ಹೇಳಿದರು.

ಮುಂದಿನ ಬಾರಿ ನಮ್ಮಿಂದಲೇ ದಸರೆ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ: ನನ್ನ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದ್ದು ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುವುದರೊಂದಿಗೆ ಮೈಸೂರು ದಸರಾ ಉದ್ಘಾಟನೆ ಮಾಡುತ್ತೇವೆ ಎಂದು ಮೈಸೂರಲ್ಲಿ ಹೇಳಿದ ಮಾತನ್ನೇ ಸಿಎಂ ಸಿದ್ದರಾಮಯ್ಯ ಅವರು ಚಿತ್ರದುರ್ಗದಲ್ಲೂ ಪುನರುಚ್ಚರಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ನಡೆಯಲಿದ್ದು ಈ ಬಗ್ಗೆ ಮಾಧ್ಯಮಗಳು ವಿನಾಕಾರಣ ವಿವಾದ ಸೃಷ್ಟಿಸುತ್ತಿವೆ ಎಂದಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯವೈಖರಿ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಸರ್ಕಾರದ್ದು ಮನ್ ಕೀ ಬಾತ್ ಆಗಿದ್ದರೆ ನಮ್ಮದು ಕಾಮ್ ಕೀ ಬಾತ್, ಇದರಲ್ಲಿ ಯಾವುದೇ ಕಾಪಿ ಇಲ್ಲ ಎಂದು ತಿಳಿಸಿದರು.

ನಾನೇ ಮುಂದಿನ ದಸರೆ ಉದ್ಘಾಟಿಸುವೆ: ಯಡಿಯೂರಪ್ಪ

ಬೆಂಗಳೂರು: ಮುಂದಿನ ಮೈಸೂರು ದಸರಾ ಉತ್ಸವದಲ್ಲಿ ಯಾರು ಪೂಜೆ ಮಾಡುತ್ತಾರೆ ಎಂಬುದನ್ನು ನಾಡಿನ ಜನರು ತೀರ್ಮಾನಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ವಿಶ್ವಾಸವಿದೆ. ದೈವ ಬಲದ ಜನರ ಬೆಂಬಲವೂ ಇದೆ. ಮುಂದಿನ ದಸರಾ ವೇಳೆ ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಣ್ಣ ಪುಟ್ಟ ನೆಪ ಇಟ್ಟುಕೊಂಡು ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಇದರಿಂದ ಜನ ರೊಚ್ಚಿಗೇಳುತ್ತಾರೆ ಎಂದು ಟೀಕಿಸಿದರು.