ಬೆಂಗಳೂರು(ಸೆ.8): ಡಿ.ಕೆ ಬ್ರದರ್ಸ್ ಗೆ ಪದೇ ಪದೇ ಐಟಿ, ಇಡಿ,ಸಿಬಿಐ ಭೂತ ಬಿಟ್ಟು ಹೆದರಿಸ್ತಿರೋದು ಕೇಂದ್ರ ಸರ್ಕಾರ ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. 

ಇಡಿ, ಐಟಿ ಕಾರ್ಯವೈಖರಿ ರಾಜ್ಯ ರಾಜಕಾರಣದಲ್ಲಿ ಗಂಭೀರವಾದ ಚರ್ಚೆಗೆ ಕಾರಣವಾಗಿದ್ದು, ಇಡಿಯಿಂದ ಪದೇ ಪದೇ ನೊಟೀಸ್, ಬಂಧನ ವಾರಂಟ್ ಬರುತ್ತಿರುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈವಾಡ ಇದೆ ಎಂಬ ಆರೋಪ ಕೇಳಿ ಬರುತ್ತಿದೆ.

ಇಂತದ್ದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸಿಎಂ ಕುಮಾರಸ್ವಾಮಿ, ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿ.ಎಸ್. ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿ ನಡೆಸುತ್ತಿರುವ ರಾಜಕೀಯ ಆಟವೇ ಇಡಿ, ಐಟಿ ದಾಳಿ ಎಂಬರ್ಥದಲ್ಲಿ ಆರೋಪ ಮಾಡಿದ್ದಾರೆ.

ಬಿಎಸ್ ವೈ ಆಪ್ತರ ನಡೆಯನ್ನು ಅರಿತುಕೊಂಡೇ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಇಂತಹ ಗಂಭೀರ ವಾಗ್ದಾಳಿ ನಡೆಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಎನ್ನುವುದು ರಾಜ್ಯ ಬಿಜೆಪಿ ನಾಯಕರ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಬಿಸಿ ಬಿಸಿ ಚರ್ಚೆ.

ಒಂದು ವೇಳೆ ಡಿ.ಕೆ. ಬ್ರದರ್ಸ್ ಬಂಧನವಾದರೆ ಸಮ್ಮಿಶ್ರ ಸರ್ಕಾರ ಉರುಳುವುದು ಖಚಿತವಾಗಿದ್ದು, ಇದಕ್ಕಾಗಿಯೇ ಕಾಯುತ್ತಿರುವ ಬಿಜೆಪಿ ಇಂತಹ ರಾಜಕೀಯ ದಾಳ ಉರುಳಿಸಿದೆ ಎಂದು ಹೇಳಲಾಗುತ್ತಿದೆ.

ಕೂಡಲೇ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಯಡಿಯೂರಪ್ಪ ಅವರನ್ನು ಸಿಎಂ ಮಾಡದಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ೧೦ ಸೀಟುಗಳನ್ನು ಕೂಡ ಗೆಲ್ಲುವುದಿಲ್ಲ ಎಂಬ ಆತಂಕ ರಾಜ್ಯ ಬಿಜೆಪಿ ನಾಯಕರಲ್ಲಿದೆ. ಇದೇ ಕಾರಣಕ್ಕೆ ಇಡಿ, ಐಟಿ ಬಳಸಿಕೊಂಡು ಸರ್ಕಾರವನ್ನು ಉರುಳಿಸುವ ಯೋಜನೆ ರೂಪಿಸಲಾಗಿದೆ ಎಂಬುದು ಬಿಜೆಪಿ ವಿರುದ್ಧ ಸದ್ಯ ಕೇಳಿ ಬರುತ್ತಿರುವ ಗಂಭೀರ ಆರೋಪ.

ಒಂದು ವೇಳೆ ಲೋಕಸಭೆಗೂ ಮುನ್ನವೇ ಸಮ್ಮಿಶ್ರ ಸರ್ಕಾರ ಪತನವಾಗದಿದ್ದರೆ, ಬಿಎಸ್ ವೈ ಬಿಜೆಪಿಯಲ್ಲೇ ಮೂಲೆಗುಂಪಾಗಲಿದ್ದಾರೆ ಎಂಬುದು ಅವರ ಆಪ್ತರ ಆತಂಕವಾಗಿದೆ. ಹೀಗಾಘಿ ಹೇಗಾದರೂ ಮಾಡಿ ಮತ್ತೆ ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಅವರ ಆಪ್ತ ಬಣ ಮುಂದಾಗಿದ್ದು, ಅದಕ್ಕೆ ಮುಳುವಾಗಿರುವ ಈ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದೇ ಮಾರ್ಗ ಎಂಬುದು ಈ ಬಣದ ಲೆಕ್ಕಾಚಾರ ಎನ್ನಲಾಗಿದೆ.