ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಈ ಬ್ಯಾಂಕ್ ಅಧಿಕಾರಿಗಳು ಬರೋಬ್ಬರಿ ಸುಮಾರು 32 ವರ್ಷಗಳ ಕಾಲ ಹುಡುಕಾಡಿದ್ದರು ಎನ್ನುವ ವಿಚಾರವನ್ನು ಇದೀಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬಹಿರಂಗಪಡಿಸಿದ್ದಾರೆ.
ನವದೆಹಲಿ: ‘ನಾನು ಶಾಲಾ ದಿನಗಳಲ್ಲಿ ದೇನಾ ಬ್ಯಾಂಕ್‌ನಲ್ಲಿ ಪಿಗ್ಗಿ ಬ್ಯಾಂಕ್ ಖಾತೆಯೊಂದನ್ನು ಆರಂಭಿಸಿದ್ದೆ. ಆದರೆ, ಆ ಖಾತೆಯಲ್ಲಿ ಹಣವೇ ಇರಲಿಲ್ಲ. ಅದನ್ನು ಮುಚ್ಚುವ ನಿಟ್ಟಿನಲ್ಲಿ ಬ್ಯಾಂಕಿನ ಅಧಿಕಾರಿಗಳು 32ವರ್ಷ ನನ್ನನ್ನು ಹುಡುಕಾಡಿದ್ದರು’ ಎಂಬ ಸಂಗತಿಯನ್ನು ಪ್ರಧಾನಿ ಮೋದಿ ಬಹಿರಂಗಪಡಿಸಿದ್ದಾರೆ.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆ ಉದ್ಘಾಟಿಸಿ ಮಾತನಾಡಿದ ಮೋದಿ, ‘ನಾನು ವಿದ್ಯಾರ್ಥಿಯಾಗಿದ್ದಾಗ ದೇನಾ ಬ್ಯಾಂಕ್‌ನಲ್ಲಿ ಖಾತೆ ತೆರೆದು, ಊರು ಬಿಟ್ಟಿದ್ದೆ. ಹೀಗಾಗಿ ಬ್ಯಾಂಕ್ ಖಾತೆ ಮುಕ್ತಾಯ ಮಾಡಿಸಲು ಅಧಿಕಾರಿಗಳು ನನ್ನನ್ನು ಹುಡುಕಾಡಿದ್ದರು. ಕೊನೆಗೆ 32 ವರ್ಷಗಳ ಬಳಿಕ ಬ್ಯಾಂಕ್ ಅಧಿಕಾರಿಗಳು ನಾನು ಇರುವ ಸ್ಥಳ ಪತ್ತೆ ಮಾಡಿದರು.
ನನ್ನ ಬಳಿ ಬಂದ ಬ್ಯಾಂಕ್ ಅಧಿಕಾರಿಗಳು ಖಾತೆಯನ್ನು ಮುಕ್ತಾಯಗೊಳಿಸಲು ಸಹಿ ಹಾಕುವಂತೆ ಕೇಳಿಕೊಂಡರು. ನಾನು ಗುಜರಾತಿನ ಶಾಸಕನಾದ ಬಳಿಕ ವೇತನ ಪಡೆಯಲು ಆರಂಭಿಸಿದೆ. ಆಗ ಹೊಸದಾದ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಯಿತು. ಅದಕ್ಕೂ ಮುನ್ನ ನಾನು ಬ್ಯಾಂಕ್ ಖಾತೆಯನ್ನೇ ನಿರ್ವಹಿಸಿರಲಿಲ್ಲ’ ಎಂದು ಹೇಳಿದರು.